Sports

ಹಲವು ಪಂದ್ಯಗಳಲ್ಲಿ ಸೋಲಿನ ತಂಡವಾಗಿರುವುದು ಕಷ್ಟಕರವಾಗಿದೆ: ಕೆ.ಎಲ್‌ ರಾಹುಲ್‌

ದುಬೈ, ಅ 5- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲಿನ ಬಳಿಕ ಪ್ರತಿಕ್ರಿಯಿಸಿದ ಕಿಂಗ್ಸ್ ಇಲೆವೆನ್‌ ಪಂಜಾಬ್‌ ನಾಯಕ ಕೆ.ಎಲ್‌ ರಾಹುಲ್‌ ಸತತ ಸೋಲುವುದು ಕಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಡೆದಿದ್ದ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್‌ ಪಂಜಾಬ್‌ 10 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ ಆಡಿದ ಐದು ಪಂದ್ಯಗಳಿಂದ ಪಂಜಾಬ್‌ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದಂತಾಯಿತು. ಪಂದ್ಯದ ಬಳಿಕ ಸ್ಟಾರ್‌ ಸ್ಪೋರ್ಟ್ಸ್ ಜತೆ ಮಾತನಾಡಿದ ಕೆ.ಎಲ್‌ ರಾಹುಲ್‌, “ಹಲವು ಪಂದ್ಯಗಳ ಸೋಲು ಕಷ್ಟಕರವಾಗಿದೆ. ನಾವು ಹೆಚ್ಚು ಶ್ರಮಿಸುತ್ತಿದ್ದೇವೆ. ಯಾವುದೇ ರಾಕೆಟ್ ವಿಜ್ಞಾನವಿಲ್ಲ, ನಾವು ಎಲ್ಲಿ ತಪ್ಪಾಗುತ್ತಿದ್ದೇವೆ ಎಂದು ನಮಗೆ ತಿಳಿದಿದೆ. 178 ಉತ್ತಮ ಸ್ಕೋರ್ ಎಂದು ನಾನು ಭಾವಿಸುತ್ತೇನೆ,” ಎಂದು ಹೇಳಿದರು.

“ನಾವು ಮೊದಲು ಬ್ಯಾಟಿಂಗ್‌ ಮಾಡಿದಾಗ ವಿಕೆಟ್‌ನಲ್ಲಿ ಚೆಂಡು ನಿಂತು ಬರುತ್ತಿತ್ತು, ಆದ್ದರಿಂದ 170 ಅಥವಾ 180 ರನ್‌ಗಳನ್ನು ಕಲೆ ಹಾಕಬಹುದು ಎಂದು ಅನಿಸಿತ್ತು. ಆದರೆ, ನಾವು ಕ್ಲಾಸ್‌ ಆಟಗಾರರ ಎದುರು ವಿಕೆಟ್‌ ಪಡೆಯದೇ ಇದ್ದರೆ, ನಾವು ಹೆಣಗಾಡಬೇಕಾಗುತ್ತದೆ ಎಂಬದು ಗೊತ್ತಿತ್ತು. ಆರಂಭಿಕ 7 ಅಥವಾ 8 ಓವರ್‌ಗಳಿಗೆ ವಿಕೆಟ್‌ ಪಡೆಯಲು ನಾವು ದಾಳಿ ಮಾಡಬಹುದು. ಆದರೆ, 10 ಓವರ್‌ಗಳವರೆಗೂ ಆಕ್ರಮಣಕಾರಿಯಾಗಿ ಬೌಲಿಂಗ್‌ ಮಾಡುವುದು ಕಷ್ಟವಾಗಿತ್ತು. ಅವರೆಲ್ಲ ವೃತ್ತಿಪರ ಕ್ರಿಕೆಟಿಗರು, ಅವರಿಗೆ ಎಲ್ಲಿ ತಪ್ಪಾಗಿದೆ ಗೊತ್ತಿದೆ,” ಎಂದು ರಾಹುಲ್‌ ಹೇಳಿದರು.

ಕೆ.ಎಲ್‌ ರಾಹುಲ್‌ 63 ರನ್‌ಗಳನ್ನು ಗಳಿಸುವ ಮೂಲಕ ಕಿಂಗ್ಸ್ ಇಲೆವೆನ್‌ ಪಂಜಾಬ್‌ ಪರ ಗರಿಷ್ಠ ಸ್ಕೋರರ್‌ ಆದರು. ಚೆನ್ನೈ ಸೂಪರ್‌ ಕಿಂಗ್ಸ್ ಪರ ಆರಂಭಿಕರಾದ ಫಾಫ್‌ ಡುಪ್ಲೆಸಿಸ್‌ ಹಾಗೂ ಶೇನ್‌ ವ್ಯಾಟ್ಸನ್‌ ಕ್ರಮವಾಗಿ 87 ಮತ್ತು 83 ರನ್‌ಗಳನ್ನು ದಾಖಲಿಸಿದರು. ಇವರಿಬ್ಬರ ನೆರವಿನಿಂದ 18ನೇ ಓವರ್‌ನಲ್ಲಿ ಸಿಎಸ್‌ಕೆ ಸುಲಭವಾಗಿ ಗುರಿ ಮುಟ್ಟಿತು.
“ನಮ್ಮ ತಂಡದ ಆಟಗಾರರು ಕಠಿಣ ತರಬೇತಿ ಪಡೆಯಬೇಕು. ಮುಂದಿನ ಪಂದ್ಯಗಳಿಂದ ತಂಡ ನಾವು ಎಚ್ಚೆತ್ತುಕೊಳ್ಳುತ್ತೇವೆ ಎಂಬಿಕೆ ಇದೆ,” ಎಂದು ಕೆ.ಎಲ್‌ ರಾಹುಲ್‌ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!