Bengaluru

ರಾಜಕೀಯ ಪ್ರೇರಿತ ದಾಳಿ; ಡಿಕೆಶಿ ಬೆಂಬಲಕ್ಕೆ ನಿಂತ ಕಾಂಗ್ರೆಸ್

ಬೆಂಗಳೂರು,ಅ.5- ಶಿರಾ ಹಾಗೂ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಗಂಭೀರವಾಗಿ ಪರಿಗಣಿಸಿ ಶತಾಯಗತಾಯ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕೆಂದು ಪಣತೊಟ್ಟಿದ್ದಾರೆ. ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಿ ಹೈಕಮಾಂಡ್‌ಗೆ ರವಾನಿಸಿದ್ದಾರೆ ಕೂಡ. ಇನ್ನೇನು ಅಭ್ಯರ್ಥಿ ಘೋಷಣೆಯಾಗಿ ಚುನಾವಣಾ ಪ್ರಚಾರ ಆರಂಭಿಸಬೇಕೆನ್ನುವಾಗಲೇ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆದಿದೆ.

ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಖಂಡಿಸಿರುವ ರಾಜ್ಯ ಕಾಂಗ್ರೆಸ್ ಡಿಕೆಶಿ ಬೆಂಬಲಕ್ಕೆ ನಿಂತಿದೆ. ಹೈಕಮಾಂಡ್ ಸೂಚನೆಯ ಮೇರೆಗೆ ಕೆಪಿಸಿಸಿಯ ಎಲ್ಲಾ ನಾಯಕರು ಶಿವಕುಮಾರ ಬೆನ್ನಿಗೆ ನಿಂತಿದ್ದಾರೆ.

ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ, ಡಿಕೆಶಿ ನ್ಯಾಯಾಂಗ ಹಾಗೂ ದೇವರ ಮೇಲೆ ನಂಬಿಕೆಯಿರುವ ಬಲಿಷ್ಠ ನಾಯಕ. ಪ್ರಸ್ತುತ ಚುನಾವಣಾ ಸಂದರ್ಭದಲ್ಲಿ ಸಿಬಿಐ ದಾಳಿಯಿಂದ ಅವರನ್ನು ಕಟ್ಟಿ ಹಾಕಲು ಮಾಡುತ್ತಿರುವ ಪ್ರಯತ್ನ ವಿಫಲವಾಗಲಿದ್ದು ಆರ್.ಆರ್.ನಗರ ಹಾಗೂ ಶಿರಾ ಕ್ಷೇತ್ರಗಳಲ್ಲಿ ಮತದಾರರು ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದು , ಇಡೀ ಕಾಂಗ್ರೆಸ್ ಪಕ್ಷ ಡಿಕೆಶಿ ಜೊತೆಗಿದ್ದು ಅವರು ಧೃತಿಗೆಡುವ ಅವಶ್ಯಕತೆಯಿಲ್ಲ ಎಂದು ಆತ್ಮಸ್ಥೈರ್ಯ ತುಂಬಿ ಟ್ವೀಟ್ ಮಾಡಿದ್ದಾರೆ.

ನರೇಂದ್ರ ಮೋದಿ ಸರ್ಕಾರ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸುವ ಕಾರ್ಯವನ್ನು ಐಟಿ,ಇಡಿ,ಸಿಬಿಐ ಸಂಸ್ಥೆಗಳ ಮೂಲಕ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಮನೆ ಮೇಲೆ ಮಾತ್ರ ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ದಾಳಿ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ ಮನೆ ಮೇಲಿನ ದಾಳಿ ರಾಜಕೀಯ ಪ್ರೇರಿತ. ಡಿ.ಕೆ.ಶಿವಕುಮಾರ ಅವರ ನಾಯಕತ್ವಕ್ಕೆ ಬೆದರಿ ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂತಹ ನೀಚ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ನರೇಂದ್ರ ಮೋದಿ ಅವರಿಗೆ ನೈತಿಕತೆಯಿದ್ದರೆ ಮೊದಲು ಯಡಿಯೂರಪ್ಪ ಕುಟುಂಬದ ಹಗರಣಗಳನ್ನು ತನಿಖೆಗೆ ಒಳಪಡಿಸಲು ಆದೇಶ ನೀಡಬೇಕು ಎಂದು ಸಲೀಂ ಅಹ್ಮದ್ ಆಗ್ರಹಿಸಿದ್ದಾರೆ.

ಕೆಪಿಸಿಸಿ ಮಾಜಿ ಅಧ್ಯಕ್ಷ ಶಾಸಕ ದಿನೇಶ ಗುಂಡೂರಾವ,ಸಂಚಿನ ದಾಳಿಯ ಮೂಲಕ ಕಾಂಗ್ರೆಸ್ ನಾಯಕರ ಮಾನಸಿಕ ಸ್ಥೈರ್ಯ ಕಸಿದುಕೊಳ್ಳಲು ಸಾಧ್ಯವಿಲ್ಲ. ಅದು ಬಿಜೆಪಿ ನಾಯಕರ ಭ್ರಮೆಯಷ್ಟೆ. ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುವ ಸಿಬಿಐಗೆ ಯಡಿಯೂರಪ್ಪ ಮತ್ತು ಅವರ ಮಗನ ಬ್ರಹ್ಮಾಂಡ ಭ್ರಷ್ಟಾಚಾರ ಕಣ್ಣಿಗೆ ಕಾಣಿಸುತ್ತಿಲ್ಲವೆ? ಪ್ರತಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸುವುದ್ಯಾಕೆ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತ. ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆಯ ಸಂದರ್ಭದಲ್ಲೇ ಈ ದಾಳಿ ನಡೆದಿರುವುದು ಅದರ ಹಿಂದಿನ ಉದ್ದೇಶ ತೋರಿಸುತ್ತದೆ. ಬಿಜೆಪಿ ನಾಯಕರು ತಮ್ಮ ದ್ವೇಷದ ರಾಜಕಾರಣಕ್ಕೆ ತಕ್ಕ ಬೆಲೆ ತೆರುವ ದಿನ ದೂರವಿಲ್ಲ ಎಂದು ದಿನೇಶ ಕುಮಾರ ಹೇಳಿದ್ದಾರೆ.

ಶಾಸಕಿ ಹಾಗೂ ಕೆಪಿಸಿಸಿ ವಕ್ತಾರೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಇದು ರಾಜಕೀಯ ಪ್ರೇರಿತ ದಾಳಿ ಎಂದು ಖಂಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!