Bengaluru

ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ

ಬೆಂಗಳೂರು, ಅ.5- ಉಪ ಚುನಾವಣೆಯ ಹೊಸ್ತಿಲಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ನಿವಾಸಗಳು ಹಾಗೂ ಕಚೇರಿ ಸೇರಿದಂತೆ 15 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ. 60ಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಸಿಬಿಐ ಪೊಲೀಸ್ ವರಿಷ್ಠಾಧಿಕಾರಿ ಥಾಮ್ಸನ್ ಜೋಸ್ ನೇತೃತ್ವದಲ್ಲಿ ಶಿವಕುಮಾರ್ ಅವರ ಸದಾಶಿವ ನಗರದ ಎರಡು ನಿವಾಸ, ಸಂಸದ ಡಿ.ಕೆ.ಸುರೇಶ್ ಅವರ ಎರಡು ಮನೆ, ರಾಮನಗರ ಜಿಲ್ಲೆಯ ದೊಡ್ಡ ಆಲಹಳ್ಳಿ, ಕನಕಪುರ ಹಾಗೂ ಡಿ.ಕೆ.ಶಿವಕುಮಾರ್ ಅವರ ಒಡೆತನದ ಕಚೇರಿಗಳಲ್ಲಿಯೂ ಪರಿಶೀಲನೆ ನಡೆಸಲಾಗುತ್ತಿದೆ.

ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿರುವುದನ್ನು ರದ್ದುಪಡಿಸುವಂತೆ ಡಿ.ಕೆ.ಶಿವಕುಮಾರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅರ್ಜಿ ವಜಾಗೊಳಿಸಿದ ಹಿನ್ನೆಲೆಯಲ್ಲಿ ಸಿಬಿಐ ದಾಳಿ ನಡೆಸಿದೆ ಎನ್ನಲಾಗಿದೆ.

ಸಿಬಿಐ ದಾಳಿಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿ, ಶಿವಕುಮಾರ್ ಮನೆ ಮೇಲೆ ಸಿಬಿಐಯನ್ನು ಸಾಕು ನಾಯಿಯಾಗಿಸಿ ದಾಳಿ ನಡೆಸುವ ಮೂಲಕ ನಮ್ಮನ್ನು ಬೆದರಿಸುವ ಮೋದಿ- ಯಡಿಯೂರಪ್ಪ ಜೋಡಿಯ ಕಪಟ ನಾಟಕ ಯಶಸ್ವಿಯಾಗುವುದಿಲ್ಲ. ಯಡಿಯೂರಪ್ಪ ಸರ್ಕಾರದ ಭ್ರಷ್ಟಾಚಾರಗಳನ್ನು ಸಿಬಿಐ ಪರಿಶೋಧಿಸಬೇಕಿತ್ತು. ಆದರೆ ದಾಳಿ ರಾಜನದ್ದು ಯಾವಾಗಲೂ ಕಪಟತನ ನಡೆ ಮಾತ್ರವಾಗಿದೆ ಎಂದು ಕಿಡಿಕಾರಿದ್ದಾರೆ.

ಮೋದಿ -ಯಡಿಯೂರಪ್ಪ ಸರ್ಕಾರಗಳು ಮತ್ತು ಬಿಜೆಪಿಯ ಮುಂಚೂಣಿ ಅಂಗ ಸಂಸ್ಥೆಗಳಾದ ಸಿಬಿಐ-ಇಡಿ, ಆದಾಯ ತೆರಿಗೆ ಸಂಸ್ಥೆಗಳ ಇಂತಹ ಮೋಸಗೊಳಿಸುವ ಪ್ರಯತ್ನಗಳ ಎದುರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಸೋಲುವುದಿಲ್ಲ ಅಥವಾ ತಲೆಬಾಗುವುದಿಲ್ಲ. ಜನರಿಗಾಗಿ ಹೋರಾಡಲು ಮತ್ತು ಬಿಜೆಪಿಯ ದುರಾಡಳಿತವನ್ನು ಬಹಿರಂಗಪಡಿಸುವ ನಮ್ಮ ಸಂಕಲ್ಪವು ಮತ್ತಷ್ಟು ಬಲಗೊಳ್ಳುತ್ತವೆ ಎಂದು ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದಾಳಿಯನ್ನು ಖಂಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ನರೇಂದ್ರ ಮೋದಿ ಸರ್ಕಾರ ನಡೆಸಿರುವ ಸಿಬಿಐ ದಾಳಿ ರಾಜಕೀಯ ದುಷ್ಟತನದ ಪರಮಾವಧಿ, ಇದು ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಿಕ್ಕಾಗದ ಬಿಜೆಪಿ ನಾಯಕರ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!