Riyadh

ಮೆಕ್ಕಾಗೆ ಉಮ್ರಾ ಯಾತ್ರೆ ಪುನರಾರಂಭಿಸಿದ ಸೌದಿ ಅರೇಬಿಯಾ

ರಿಯಾದ್, ಅ 4- ಸೌದಿ ಅರೇಬಿಯಾ ಸರ್ಕಾರ ಶನಿವಾರ ತಡರಾತ್ರಿ ಉಮ್ರಾ ಯಾತ್ರೆಯನ್ನು ಪವಿತ್ರ ನಗರವಾದ ಮೆಕ್ಕಾಗೆ ಪುನರಾರಂಭಿಸಿದೆ ಎಂದು ಅಲ್ಲಿನ ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.

ಸೌದಿ ಅರೇಬಿಯಾದಲ್ಲಿ ಮೊದಲ ಕೊರೊನಾವೈರಸ್ ಪ್ರಕರಣ ವರದಿಯಾದ ನಂತರ ಮಾರ್ಚ್‍ ನಲ್ಲಿ ದೇಶೀಯ ಮತ್ತು ವಿದೇಶಿ ಯಾತ್ರಿಕರು ಕೈಗೊಳ್ಳುವ ಯಾತ್ರೆಯನ್ನು ಸರ್ಕಾರ ಸ್ಥಗಿತಗೊಳಿಸಿತ್ತು.

‘ಉಮ್ರಾ ಯಾತ್ರೆ ಪುನರಾರಂಭ ನಾಲ್ಕು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಅದು ಅ 4 ರಿಂದ ಕೇವಲ ಶೇ 30ರಷ್ಟು ಯಾತ್ರಿಕರೊಂದಿಗೆ, ಎರಡನೇ ಹಂತ ಅ 18 ರಂದು ಶೇ 75ರಷ್ಟು ಯಾತ್ರಿಕರು ಪಾಲ್ಗೊಳ್ಳುವುದರೊಂದಿಗೆ ಆರಂಭವಾಗಲಿದೆ.

‘ನ 1 ರಿಂದ, ಉಮ್ರಾ ಯಾತ್ರೆ ಕ್ರಮೇಣ ದೇಶದೊಳಗಿನ ಮತ್ತು ವಿದೇಶದಿಂದ ಆಗಮಿಸುವ ಎಲ್ಲಾ ಆಸಕ್ತ ಯಾತ್ರಿಕರಿಗೆ ಮುಕ್ತವಾಗುತ್ತದೆ. ಹಿಂದಿನಂತೆ ಶೇ 100ರಷ್ಟು ಸಂಪೂರ್ಣವಾಗಿ ನಡೆಸಲಾಗುವುದು. ಇದು ಸಾಂಕ್ರಾಮಿಕ ರೋಗದ ಅಂತ್ಯವನ್ನು ಘೋಷಿಸಿದಾಗ ಮತ್ತು ಅಪಾಯ ಕಣ್ಮರೆಯಾಗುವುದನ್ನು ಆಧರಿಸಿದೆ.’ಎಂದು ಸಚಿವಾಲಯ ಸೌದಿ ಪ್ರೆಸ್‍ ಏಜೆನ್ಸಿಗೆ ತಿಳಿಸಿದೆ.

ದೇಶದಲ್ಲಿರುವ 1,08,000 ಕ್ಕೂ ಹೆಚ್ಚು ವಿದೇಶಿ ಮತ್ತು ಸ್ಥಳೀಯ ಯಾತ್ರಿಕರು ಇದೀಗ ಉಮ್ರಾದಲ್ಲಿ ಭಾಗವಹಿಸಲು ಅನುಮತಿಯನ್ನು ಪಡೆದಿದ್ದಾರೆ. ಯಾತ್ರೆಯ ಸಮಯದಲ್ಲಿ ಮುಖಗವಸು ಕಡ್ಡಾಯ, ರೋಗ ನಿರೋಧಕ ಸಿಂಪಡಣೆ ಮತ್ತು ವ್ಯಕ್ತಿಗತ ಅಂತರದಂತಹ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

Leave a Reply

Your email address will not be published. Required fields are marked *

Back to top button
error: Content is protected !!