Sports

ದೇವದತ್‌ ಪಡಿಕ್ಕಲ್‌ ಬ್ಯಾಟಿಂಗ್‌ ಮೆಚ್ಚಿಕೊಂಡ ಆರ್‌ಸಿಬಿ ಕೋಚ್‌ ಸೈಮನ್ ಕ್ಯಾಟಿಚ್‌

ನವದೆಹಲಿ, ಅ 4- ಹದಿಮೂರನೇ ಆವೃತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ದೇವದತ್‌ ಪಡಿಕ್ಕಲ್‌ ಅವರ ‘ಉಜ್ವಲ ಭವಿಷ್ಯ’ ನನ್ನ ಕಣ್ಣ ಮುಂದೆ ಗೋಚರಿಸುತ್ತಿದೆ ಎಂದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್‌ ಸೈಮನ್‌ ಕ್ಯಾಟಿಚ್‌ ತಿಳಿಸಿದ್ದಾರೆ.

ಶನಿವಾರ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಎಂಟು ವಿಕೆಟ್‌ಗಳ ಗೆಲುವಿನಲ್ಲಿ ದೇವದತ್‌ ಪಡಿಕ್ಕಲ್‌ ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ ಎರಡರಲ್ಲೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಮಹತ್ವದ ಪಾತ್ರವಹಿಸಿದ್ದರು. ಕರ್ನಾಟಕ ಆಟಗಾರ ಮೊದಲನೇ ಸ್ಲಿಪ್‌ನಲ್ಲಿ ಜೋಸ್‌ ಬಟ್ಲರ್‌(22) ಅವರ ಅದ್ಭುತ ಕ್ಯಾಚ್‌ ಹಾಗೂ 17ನೇ ಓವರ್‌ನಲ್ಲಿ ಲಾಂಗ್‌ ಆಫ್‌ ಮಹಿಪಾಲ್‌ ಲೊಮ್ರೊರ್‌(47) ಅವರ ಕ್ಯಾಚ್‌ ಅನ್ನು ಹಿಡಿದಿದ್ದರು.

155 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ, ಬಹುಬೇಗ ಆರೋನ್‌ ಫಿಂಚ್‌ ವಿಕೆಟ್‌ ಕಳೆದುಕೊಂಡಿತು. ನಂತರ ಜತೆಯಾದ ವಿರಾಟ್‌ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್‌ ಜೋಡಿ, ಎರಡನೇ ವಿಕೆಟ್‌ಗೆ 99 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಸಮೀಪ ತಂದಿತು. ಅದ್ಭುತ ಬ್ಯಾಟಿಂಗ್‌ ಮಾಡಿದ ಪಡಿಕ್ಕಲ್‌ ಪ್ರಸಕ್ತ ಆವೃತ್ತಿಯ ಮೂರನೇ ಅರ್ಧಶತಕ ಬಾರಿಸಿದರು. 63 ರನ್‌ ಗಳಿಸಿ ಆಡುತ್ತಿದ್ದ ಅವರು 16ನೇ ಓವರ್‌ನಲ್ಲಿ ಜೋಫ್ರಾ ಆರ್ಚರ್‌ಗೆ ಕ್ಲೀನ್‌ ಬೌಲ್ಡ್ ಆದರು.

ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್‌ ಕೊಹ್ಲಿ ಜೋಡಿ ಅಂತಿಮವಾಗಿ 34 ರನ್‌ಗಳ ಜತೆಯಾಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿತು. ಕಳೆದ ಪಂದ್ಯಗಳಲ್ಲಿ ಲಯಕ್ಕಾಗಿ ಪರದಾಡುತ್ತಿದ್ದ ವಿರಾಟ್‌ ಕೊಹ್ಲಿ, ಅಜೇಯ 72 ರನ್‌ಗಳು ಹಾಗೂ ಎಬಿಡಿ ಅಜೇಯ 12 ರನ್‌ಗಳನ್ನು ಗಳಿಸಿದರು.

ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್‌ಸಿಬಿ ಕೋಚ್ ಸೈಮನ್‌ ಕ್ಯಾಟಿಚ್‌, “ಕಳೆದ ಕೆಲವು ವಾರಗಳ ಹಿಂದೆ ಪೂರ್ವ ತಯಾರಿಯಾಗಿ ಮಧ್ಯಾಹ್ನ 2 ಗಂಟೆಗೆ ಅಭ್ಯಾಸ ಪಂದ್ಯದಲ್ಲಿ ಆಡಿದ್ದೆವು. ಆದರೆ, ಈ ಸಮಯದಲ್ಲಿ ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಸುಲಭವಲ್ಲ ಎಂದೆನಿಸಿತ್ತು. ವಿಶೇಷವಾಗಿ ದೇವದತ್‌ ಪಡಿಕ್ಕಲ್‌, ಫೀಲ್ಡಿಂಗ್‌ನಲ್ಲಿ ಪ್ರಧಾನ ಪಾತ್ರ ವಹಿಸಿದರು. ಜೋಸ್‌ ಬಟ್ಲರ್‌ ಕ್ಯಾಚ್‌ ಹಿಡಿದಿದ್ದು ಅದ್ಭುತವಾಗಿತ್ತು, ಜತೆಗೆ ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಕೌಶಲ ಮೆರೆದರು,” ಎಂದು ಶ್ಲಾಘಿಸಿದರು.

“ಐಪಿಎಲ್‌ ಟೂರ್ನಿಯಲ್ಲಿ ಅವರು ತೋರುತ್ತಿರುವ ಪ್ರದರ್ಶನ ಅದ್ಭುತವಾಗಿದೆ. ನಿಜವಾಗಲೂ ಅವರು ಪ್ರತಿಭಾವಂತ ಆಟಗಾರ ಎನ್ನುವುದರಲ್ಲಿ ಅನುಮಾನವಿಲ್ಲ. ಅವರ ‘ಉಜ್ವಲ ಭವಿಷ್ಯ’ ಈಗಲೇ ಕಣ್ಣ ಮುಂದೆ ಗೋಚರಿಸುತ್ತಿದೆ,” ಎಂದು ಕ್ಯಾಟಿಚ್‌ ಕರ್ನಾಟಕದ ಬ್ಯಾಟ್ಸ್‌ಮನ್‌ ಅನ್ನು ಕೊಂಡಾಡಿದರು.

ದುಬೈ ಅಂಗಳಕ್ಕೆ ಅಬುಧಾಬಿಯನ್ನು ಹೋಲಿಕೆ ಮಾಡಿದರೆ, ಇದು ನಿಧಾನಗತಿಯಿಂದ ಕೂಡಿದೆ. ಸ್ಪಿನ್ನರ್‌ಗಳಿಗೆ ಇದು ಸಹಾಯ ಮಾಡುವುದಿಲ್ಲ ಎಂದು ಕ್ಯಾಟಿಚ್‌ ತಿಳಿಸಿದರು.

“ಇವತ್ತಿನ(ಅ.3) ವಿಕೆಟ್‌ ಅದ್ಭುತವಾಗಿತ್ತು.ನಾವು ಆಡಿದ ರೀತಿ ಹಾಗೂ ರನ್‌ ಗಳಿಸಿದ ರೀತಿ ಹಾಗೂ ಬಹುತೇಕ ಬ್ಯಾಟ್ಸ್‌ಮನ್‌ ಅನುಭವ, ದುಬೈಗಿಂತ ಅಬುಧಾಬಿ ಸ್ವಲ್ಪ ನಿಧಾನಗತಿಯಿಂದ ಕೂಡಿದೆ. ಇಲ್ಲಿನ ವಿಕೆಟ್‌ ಹೆಚ್ಚು ಸ್ಪಿನ್‌ ಆಗುತ್ತಿರಲಿಲ್ಲ. ಆದರೂ, ಎರಡನೇ ಇನಿಂಗ್ಸ್‌ನಲ್ಲಿ ನಾವು ಅದ್ಭುತವಾಗಿ ಬ್ಯಾಟಿಂಗ್‌ ಮಾಡಿದ್ದೇವೆ,” ಎಂದು ಸೈಮನ್‌ ಕ್ಯಾಟಿಚ್‌ ಹೇಳಿದರು.

ಗೇಮ್‌ ಪ್ಲ್ಯಾನ್‌ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಗೇಮ್‌ ಪ್ಲ್ಯಾನ್‌ ಬದಲಾವಣೆ ಮಾಡುವ ಬಗ್ಗೆ ನಾವು ಯಾವುದೇ ಯೋಚನೆ ಮಾಡಲಿಲ್ಲ. 20 ಓವರ್‌ಗಳ ಕಾಲ ದೈಹಿಕವಾಗಿ ಇಲ್ಲಿನ ವಾತಾವರಣಕ್ಕೆ ಹೇಗೆ ಹೊಂದಿಕೊಳ್ಳುತ್ತೀರಿ ಎಂಬುದು ಮುಖ್ಯ ವಿಷಯವಾಗಿತ್ತು. ವಿಶೇಷವಾಗಿ ಬ್ಯಾಟ್ಸ್‌ಮನ್‌ಗಳ ತಲೆ ಮೇಲೆ ಇದು ಪರಿಣಾಮ ಬೀರುತ್ತದೆ. ಇದು ನಮ್ಮ ಇನಿಂಗ್ಸ್‌ನಲ್ಲಿ ಅನುಭವಿಸಿದ್ದೇವೆ,” ಎಂದು ಅವರು ತಿಳಿಸಿದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!