Bengaluru

ಅನುಶ್ರೀ ಪ್ರಕರಣದಲ್ಲಿ ಕೇಳಿ ಬಂದ ಮಾಜಿ ಮುಖ್ಯಮಂತ್ರಿ ಹೆಸರು ಬಹಿರಂಗಪಡಿಸಿ; ಎಚ್.ಡಿ.ಕೆ ಆಗ್ರಹ

ಬೆಂಗಳೂರು,ಅ.3- ಡ್ರಗ್ಸ್ ದಂಧೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ನಿರೂಪಕಿ ಅನುಶ್ರೀ ವಿಚಾರದಲ್ಲಿ ಸಿಸಿಬಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವ ಮಾಜಿ ಮುಖ್ಯಮಂತ್ರಿ ಯಾರು ಎನ್ನುವುದು ಸ್ಪಷ್ಟವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಿರೂಪಕಿ ಅನುಶ್ರೀ ಗೆ ಮಂಗಳೂರಿನ ಸಿಸಿಬಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ಅನುಶ್ರೀ ಮೂರು ರಾಜಕೀಯ ಪಕ್ಷಗಳ ಮುಖಂಡರಿಗೆ ಕರೆ ಮಾಡಿದ್ದರ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ಬಂದಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಯ ಮಗ, ಪ್ರಭಾವಿ ರಾಜಕಾರಣಿ ಎಂದೆಲ್ಲ ಸುದ್ದಿಯಾಗಿದೆ. ಮಾಜಿ ಮುಖ್ಯಮಂತ್ರಿಗಳಲ್ಲಿ ವೀರಪ್ಪ ಮೊಯಿಲಿ, ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಎಸ್.ಎಂ.ಕೃಷ್ಣ ಸೇರಿದಂತೆ ತಾವು ಬದುಕಿದ್ದು, ಯಾವ ಮಾಜಿ ಮುಖ್ಯಮಂತ್ರಿ ಎಂಬ ಹೆಸರು ಹೊರಬರಬೇಕು. ಮಂಗಳೂರಿನ ವರದಿಗಾರರಿಂದಲೂ ತಾವು ಮಾಹಿತಿ ಪಡೆದಿದ್ದು, ಯಾರು ಆ ಮಾಜಿ ಮುಖ್ಯಮಂತ್ರಿ ಎಂಬುದನ್ನು ಮಾಧ್ಯಮಗಳು ಹೇಳಬೇಕು. ಒಂದು ವೇಳೆ ಮಾಧ್ಯಮಗಳೇ ಇದನ್ನು ಸೃಷ್ಟಿಸಿದ್ದೇ ಆದಲ್ಲಿ ಸರ್ಕಾರ ಆ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಆ ಹೆಣ್ಣು ಮಗಳು ಮಾಜಿ ಮುಖ್ಯಮಂತ್ರಿ ಜತೆ ಮಾತನಾಡಿದ್ದರೆ ಸತ್ಯ ಗೊತ್ತಾಗಲಿ. ಯಾರು ಆ ಮಾಜಿ ಮುಖ್ಯಮಂತ್ರಿ ಎನ್ನುವುದು ಸಾರ್ವಜನಿಕವಾಗಿ ಜನರ ಮುಂದೆ ಮೊದಲು ಬರಲಿ.

ಆ ಮಾಜಿ ಮುಖ್ಯಮಂತ್ರಿಗೆ ಶಿಕ್ಷೆಯಾಗಲಿ ಎಂದು ಹೇಳಿದ ಕುಮಾರಸ್ವಾಮಿ, ತನಿಖೆ ಮಾಹಿತಿ ಸೋರಿಕೆ ಆಗಬಾರದು. ಮಾಧ್ಯಮಗಳಿಗೆ ಈ ಸುದ್ದಿ ಸೋರಿಕೆ ಆಗಬಾರದು. ಜನರ ಸಮಸ್ಯೆಗಳನ್ನು ವಿಷಯಾಂತರ ಮಾಡುವುದಕ್ಕೆ ಹೀಗೆ ಸರ್ಕಾರ ಮಾಡುತ್ತಿದೆಯೇ? ಎಂಬ ಅನುಮಾನ ಮೂಡುತ್ತಿದೆ.ಡ್ರಗ್ ದಂ ಧೆ ಮಾಫಿಯದಲ್ಲಿ ತೊಡಗಿದ್ದವರ ಬಗ್ಗೆ ಇತ್ತೀಚಿನ ಎರಡು ತಿಂಗಳಲ್ಲಿ ಭಾರೀ ಸುದ್ದಿಯಾಗಿದೆ. ಆದರೆ ಮೊದಲೇ ಹೇಳಿದಂತೆ ಇದು ತಾರ್ಕಿಕ ಅಂತ್ಯ ಕಾಣದೇ ಹಳ್ಳ ಹಿಡಿಯುತ್ತಿದೆ. ಸರ್ಕಾರಿ ನೌಕರನ ಮೊಬೈಲ್ ಸಂಖ್ಯೆಯೊಂದರಿಂದ ಶಿವಪ್ರಕಾಶ್ ಎಂಬ ವ್ಯಕ್ತಿ ಮಾಹಿತಿ ಸೋರಿಕೆ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ.

ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ರದ್ದು ಎನ್ನಲಾದ ಮೊಬೈಲ್ ನಂಬರ್ ಅನ್ನು ಈ ವೇಳೆ ಮಾಧ್ಯಮಗಳಿಗೆ ಕುಮಾರಸ್ವಾಮಿ ಬಿಡುಗಡೆ ಮಾಡಿ, ಈ ಸಂಖ್ಯೆಯಿಂದ ಮಾಹಿತಿ ಸೋರಿಕೆಯಾಗಿದ್ದರೆ ಈ ಬಗ್ಗೆ ಸರ್ಕಾರ ಸಂಪೂರ್ಣವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ನಾನು ಈಗ ಮಾತಾಡದಿದ್ದರೆ ಜನ ಅವರಿಗೆ ಬೇಕಾದ ಹಾಗೆ ಕಲ್ಪನೆ ಮಾಡಿಕೊಳ್ಳುತ್ತಾರೆ. ಕಪೋಲಕಲ್ಪಿತ ಸುದ್ದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೆ ಪತ್ರ ಬರೆಯುವುದಾಗಿ ಹೇಳಿದರು.

ಯಾರೋ ಒಬ್ಬರ ತೇಜೋವಧೆ ಮಾಡಲು ಮಾಧ್ಯಮಗಳು ಮುಂದಾದರೆ ಸುಮ್ಮನೆ ಇರಲು ಸಾಧ್ಯವಿಲ್ಲ. ಕೆಲವು ಮಾಧ್ಯಮಗಳು ಅದರದ್ದೇ ಆದ ರೀತಿಯ ವರದಿಗಳನ್ನು ಮಾಡುತ್ತಿವೆ.

ನಿರೂಪಕಿ ಅನುಶ್ರೀ ವಿಚಾರದಲ್ಲಿ ಕೂಡಾ ಇಂತದ್ದೇ ವರದಿಗಳು ಬರುತ್ತಿವೆ. ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಸರ್ಕಾರ ಹೊರ ತರಬೇಕು. ಈ ರೀತಿಯ ಕಪೋಲಕಲ್ಪಿತ ವರದಿಗಳನ್ನು ಸುಮ್ಮನೆ ಬಿಡಬಾರದು ಎಂದು ಕಿಡಿಕಾರಿದರು.

ಪ್ರಶಾಂತ್ ಸಂಬರಗಿ ಯಾರು ಎಂಬುದು ಗೊತ್ತೇ ಇಲ್ಲ. ಅವನಿಗೂ ನನಗೂ ಸಂಬಂಧ ಇಲ್ಲ. ಡ್ರಗ್ಸ್ ಪ್ರಕರಣದಲ್ಲಿ ರಾಜಕಾರಣಿಗಳ ಮಕ್ಕಳು, ಅವರು ಇವರು ಇದ್ದಾರೆ ಎಂದು ಸಂಬರಗಿ ದಿನಕ್ಕೊಂದು ಹೇಳಿಕೆ ಕೊಡುತ್ತಲೇ ಇರುತ್ತಾನೆ. ಆದರೆ ಅವನು ಏಕೆ ಹೆಸರನ್ನು ಹೇಳುವುದಿಲ್ಲ. ಸಬರಗಿಯದ್ದು ತಪ್ಪಿದ್ದರೆ ಸರ್ಕಾರ ಅವನನ್ನು ಒದ್ದು ಒಳಹಾಕಲಿ ಎಂದು ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡುವುದಕ್ಕೂ ಮುನ್ನ ಕುಮಾರಸ್ವಾಮಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಜೊತೆ ಕೆಐಡಿಎಬಿ ಸಭೆಯಲ್ಲಿ ಭಾಗವಹಿಸಿದ್ದರು.

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರು-ಹಾಸನ ರಸ್ತೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕೈಗಾರಿಕಾ ವಸಾಹತು ನಿರ್ಮಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. 1270 ಎಕರೆ ಭೂಮಿಯನ್ನು ಪ್ರೀಮಿಯರ್ ನೋಟಿಫಿಕೆಷನ್ ಮಾಡಿದ್ದರ ಬಗ್ಗೆ ರೈತರಲ್ಲಿ ಆತಂಕ ಹುಟ್ಟಿಕೊಂಡಿದೆ. ಅದನ್ನು ಕೆಲ ರಾಜಕೀಯ ಪಕ್ಷಗಳು ಲಾಭಪಡೆಯಲೆತ್ನಿಸಿವೆ. ಈ ವಿಚಾರದಲ್ಲಿಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗದಂತೆ ವಸಾಹತು ನಿರ್ಮಿಸಬೇಕು. ಬಿಡದಿ ಕೈಗಾರಿಕಾ ವಸಾಹತು ನಿರ್ಮಿಸುವ ಬಗ್ಗೆಯೂ ಶೆಟ್ಟರ್ ಜೊತೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!