New DelhiHathras

ಹತ್ರಾಸ್ ಸಂತ್ರಸ್ತೆಯ ಕುಟುಂಬದ ಭೇಟಿಯನ್ನು ತಡೆಯಲು ಸಾಧ್ಯ ಇಲ್ಲ

ನವದೆಹಲಿ, ಅ 03 – ಹತ್ರಾಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ ಮತ್ತು ರಾಜ್ಯ ಪೊಲೀಸರು ಬೆದರಿಕೆ ಹಾಕಿರುವುದನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಅಮಾನುಷವಾಗಿ ಅತ್ಯಾಚಾರಕ್ಕೊಳಗಾಗಿ, ಹತ್ಯೆಗೀಡಾದ ಯುವತಿಯ ಕುಟುಂಬಸ್ಥರನ್ನು ತಾವು ಭೇಟಿ ಮಾಡುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಎಂದಿದ್ದಾರೆ.

ಸಾಮೂಹಿಕ ಅತ್ಯಾಚಾರಕ್ಕೊಳಗಾದವರ ಕುಟುಂಬವನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕರ ನಿಯೋಗವನ್ನು ಶನಿವಾರ ಹತ್ರಾಸ್‌ಗೆ ಕರೆದೊಯ್ಯುತ್ತಿರುವ ರಾಹುಲ್, ಜಗತ್ತಿನ ಯಾವುದೇ ಶಕ್ತಿಯು ಕುಟುಂಬವನ್ನು ಭೇಟಿಯಾಗುವುದನ್ನು ಮತ್ತು ಅವರ ನೋವನ್ನು ಹಂಚಿಕೊಳ್ಳುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಮತ್ತು ರಾಜ್ಯ ಪೊಲೀಸರು ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆ ಮತ್ತು ಅವರ ಕುಟುಂಬವನ್ನು ನಡೆಸಿಕೊಂಡಿರುವ ರೀತಿ ಸ್ವೀಕಾರಾರ್ಹವಲ್ಲ. ಅಂತಹ ನಡವಳಿಕೆಯನ್ನು ಯಾವುದೇ ಭಾರತೀಯರು ಒಪ್ಪಿಕೊಳ್ಳಬಾರದು. ಕುಟುಂಬವನ್ನು ಭೇಟಿಯಾಗುವುದನ್ನು ಮತ್ತು ಅವರ ನೋವನ್ನು ಹಂಚಿಕೊಳ್ಳುವುದನ್ನು ವಿಶ್ವದ ಯಾವುದೇ ಶಕ್ತಿಯಿಂದ ತಡೆಯಲು ಸಾಧ್ಯವಿಲ್ಲ ‘ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಈ ಕುರಿತು ಪ್ರಿಯಾಂಕಾ ವಾದ್ರಾ ಟ್ವೀಟ್ ಮಾಡಿದ್ದು, ಉತ್ತರ ಪ್ರದೇಶ ಸರ್ಕಾರ ‘ನೈತಿಕವಾಗಿ ಭ್ರಷ್ಟವಾಗಿದೆ’ ಎಂದು ಆರೋಪಿಸಿದ್ದಾರೆ. “ಸಂತ್ರಸ್ತೆಗೆ ಸಕಾಲದಲ್ಲಿ ವೈದ್ಯಕೀಯ ಆರೈಕೆ ನೀಡಲಾಗಿಲ್ಲ. ಆಕೆಯ ದೂರನ್ನು ಸಮಯಕ್ಕೆ ಸರಿಯಾಗಿ ದಾಖಲಿಸಿಕೊಂಡಿಲ್ಲ. ಆಕೆಯ ದೇಹವನ್ನು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಲಾಯಿತು. ಸಂತ್ರಸ್ತೆಯ ಕುಟುಂಬವನ್ನು ಬಂಧನದಲ್ಲಿಡಲಾಗಿದೆ ಮತ್ತು ಒತ್ತಡ ಹೇರುತ್ತಿದೆ. ಈಗ, ಅವರ ನಾರ್ಕೊ ಪರೀಕ್ಷೆ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗುತ್ತಿದೆ “ಈ ನಡವಳಿಕೆಯು ದೇಶಕ್ಕೆ ಸ್ವೀಕಾರಾರ್ಹವಲ್ಲ. ಬಲಿಪಶುವಿನ ಕುಟುಂಬಕ್ಕೆ ಬೆದರಿಕೆ ಹಾಕುವುದನ್ನು ನಿಲ್ಲಿಸಿ.” ಎಂದಿದ್ದಾರೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹತ್ರಾಸ್ ಸಾಮೂಹಿಕ ಅತ್ಯಾಚಾರ ಘಟನೆ ಕುರಿತು ಉತ್ತರ ಪ್ರದೇಶ ಸರ್ಕಾರ ಹಾಗೂ ಮುಖ್ಯಮಂತ್ರಿ ಆದಿತ್ಯನಾಥ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!