Rohtang La

ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ‘ಅಟಲ್ ಟನಲ್’ ಉದ್ಘಾಟನೆ

ರೋಹ್ತಂಗ್, ಅ 3- ಹಿಮಾಚಲ ಪ್ರದೇಶದ ರೋಹ್ತಂಗ್‍ನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವೆನಿಸಿರುವ’ ಅಟಲ್ ಟನಲ್’ ಅನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು.

ಇದು ಲೇಹ್ ಮತ್ತು ಮನಾಲಿ ನಡುವಿನ ಪ್ರಯಾಣದ ಸಮಯವನ್ನು 4-5 ಗಂಟೆಗಳವರೆಗೆ ಮತ್ತು ದೂರವನ್ನು 46 ಕಿ.ಮೀ ಕಡಿಮೆಗೊಳಿಸಲಿದೆ.

ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ್ತು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಉಪಸ್ಥಿತರಿದ್ದರು.

9.02 ಕಿ.ಮೀ ಉದ್ದದ ಸುರಂಗ ಮನಾಲಿಯನ್ನು ವರ್ಷಪೂರ್ತಿ ಲಾಹೌಲ್-ಸ್ಪಿತಿ ಕಣಿವೆಯೊಂದಿಗೆ ಸಂಪರ್ಕಿಸುತ್ತದೆ. ಸುರಂಗ ನಿರ್ಮಾಣದ ಮುನ್ನ ಭಾರೀ ಹಿಮಪಾತದಿಂದಾಗಿ ಪ್ರತಿವರ್ಷ ಸುಮಾರು 6 ತಿಂಗಳು ಕಣಿವೆಯೊಂದಿಗೆ ಸಂಪರ್ಕ ಕಡಿದುಕೊಳ್ಳಲಾಗುತ್ತಿತ್ತು.

ಅಟಲ್ ಸುರಂಗದ ದಕ್ಷಿಣ ತುದಿ ಮನಾಲಿಯಿಂದ 25 ಕಿ.ಮೀ ದೂರದಲ್ಲಿ 3060 ಮೀಟರ್ ಎತ್ತರದಲ್ಲಿದೆ. ಸುರಂಗದ ಉತ್ತರ ತುದಿ ಲಾಹೌಲ್ ಕಣಿವೆಯ ಸಿಸ್ಸು ಎಂಬ ಹಳ್ಳಿಯ ಬಳಿ 3071 ಮೀಟರ್ ಎತ್ತರದಲ್ಲಿದೆ.

ಹಿಮಾಲಯದ ಪಿರ್ ಪಂಜಲ್ ಶ್ರೇಣಿಯಲ್ಲಿ ಅತ್ಯಾಧುನಿಕ ತಾಂತ್ರಿಕತೆಯಿಂದ ನಿರ್ಮಿಸಲಾಗಿರುವ ಸುರಂಗ ಸಮುದ್ರಮಟ್ಟದಿಂದ 3,000 ಮೀಟರ್ (10,000 ಅಡಿ) ಎತ್ತರದಲ್ಲಿದೆ.

ಇದು ಕುದುರೆ ಆಕಾರದ, ಒಂದೇ ಸುರಂಗದ ಎರಡು ಪಥದ ಎಂಟು ಕಿ.ಮೀ ಉದ್ದದ ಮಾರ್ಗವಾಗಿದೆ. ಸುರಂಗದ ಅಗಲ 10.5 ಮೀಟರ್ ನಷ್ಟಿದೆ.

ದಿನಕ್ಕೆ 3000 ಕಾರುಗಳು ಮತ್ತು 1,500 ಟ್ರಕ್‌ಗಳ ಸಂಚಾರ ಸಾಂದ್ರತೆಯೊಂದಿಗೆ ಗರಿಷ್ಠ ಗಂಟೆಗೆ 80 ಕಿ.ಮೀ ವೇಗದಲ್ಲಿ ಸಾಗುವಂತೆ ಅಟಲ್ ಸುರಂಗದಲ್ಲಿ ವಿನ್ಯಾಸಗೊಳಿಸಲಾಗಿದೆ.
ರೋಹ್ತಂಗ್ ಪಾಸ್ ಕೆಳಗೆ ಕಾರ್ಯತಂತ್ರದ ಸುರಂಗವನ್ನು ನಿರ್ಮಿಸುವ ಐತಿಹಾಸಿಕ ನಿರ್ಧಾರವನ್ನು ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ 2000ರ ಜೂನ್ 3 ರಂದು ತೆಗೆದುಕೊಳ್ಳಲಾಗಿತ್ತು. ಮೇ 26, 2002 ರಂದು ಸುರಂಗದ ದಕ್ಷಿಣ ತುದಿ ಪ್ರವೇಶ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.

ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಸೆರಿ ನಲಾಹ್ ಫಾಲ್ಟ್ ವಲಯದ 587 ಮೀಟರ್ ಉದ್ದದ ಸುರಂಗವನ್ನು ಭೌಗೋಳಿಕ, ದುರ್ಗಮ ಭೂಪ್ರದೇಶ ಮತ್ತು ಹವಾಮಾನ ಸವಾಲುಗಳನ್ನು ಮೆಟ್ಟಿ ಅವಿರತ ಶ್ರಮದಿಂದ ನಿರ್ಮಿಸಿದೆ . 2017 ರ ಅಕ್ಟೋಬರ್ 15ರಂದು ಎರಡೂ ತುದಿಗಳ ನಡುವೆ ಸಂಪರ್ಕ ಸಾಧಿಸಲಾಗಿತ್ತು.

ಮಾಜಿ ಪ್ರಧಾನಿ ದಿವಂಗತ ವಾಜಪೇಯಿ ಅವರು ನೀಡಿದ ಕೊಡುಗೆಯನ್ನು ಗೌರವಿಸಲು ಕೇಂದ್ರ ಸಚಿವ ಸಂಪುಟ 2019 ರ ಡಿ 24 ರಂದು ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ರೋಹ್ತಂಗ್ ಸುರಂಗವನ್ನು ‘ಅಟಲ್ ಟನಲ್ ‘ಎಂದು ಹೆಸರಿಸಲು ನಿರ್ಧರಿಸಿತ್ತು.

Leave a Reply

Your email address will not be published. Required fields are marked *

Back to top button
error: Content is protected !!