London

ರುಚಿ, ವಾಸನೆ ಗ್ರಹಿಸಲು ಸಾಧ್ಯವಿಲ್ಲದಿರುವುದು, ಕೋವಿಡ್ ತಗುಲಿರುವ ಖಚಿತ ಲಕ್ಷಣಗಳು…!

ಲಂಡನ್, ಅ 2- ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ವೈರಸ್ ಗುರುತಿಸುವಲ್ಲಿ ರೋಗ ಲಕ್ಷಣಗಳು ನಿರ್ಣಾಯಕ. ಆದರೆ ಈವರೆಗೆ ಜ್ವರ, ಕೆಮ್ಮು, ಶೀತ ಹಾಗೂ ನೆಗಡಿ ಮುಖ್ಯ ಲಕ್ಷಣಗಳೆಂದು ಪರಿಗಣಿಸುತ್ತಿದ್ದಾರೆ. ಆದರೆ, ಇವೆಲ್ಲವುಗಳಿಗಿಂತ ವಾಸನೆ, ರುಚಿ ಗ್ರಹಿಸಲು ಸಾಧ್ಯವಾಗದ ಲಕ್ಷಣಗಳು ಕೊರೊನಾ ವೈರಸ್ ಗುರುತಿಸುವಲ್ಲಿ ಮಹತ್ವದ ಅಂಶಗಳು ಎಂದು ತಾಜಾ ಸಂಶೋಧನೆ ಸ್ಪಷ್ಟಪಡಿಸಿದೆ. ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್) ತಜ್ಞರು ಮೊದಲ ಬಾರಿ ಈ ಕುರಿತು ಸಂಶೋಧನೆ ನಡೆಸಿದ್ದಾರೆ.

ಲಂಡನ್‌ನಲ್ಲಿ ಕೊರೊನಾ ವೈರಸ್ ಹೆಚ್ಚಳಗೊಂಡಿದ್ದ ಏಪ್ರಿಲ್-ಮೇ ತಿಂಗಳ ಮಧ್ಯ ಕಾಲದಲ್ಲಿ ಕೋವಿಡ್ ರೋಗ ಲಕ್ಷಣಗಳ ಬಗ್ಗೆ ಇದೇ ರೀತಿಯ ಸಂಶೋಧನೆ ನಡೆಸಿದ್ದರು. ಸಂಶೋಧನೆಯ ಭಾಗವಾಗಿ, ರುಚಿ ಹಾಗೂ ವಾಸನೆ ಗ್ರಹಿಸುವ ಶಕ್ತಿ ಕಳೆದು ಕೊಂಡಿರುವರು ತಮ್ಮ ಹೆಸರನ್ನು ನೋಂದಾಯಿಸಲು ಸೂಚಿಸಿದ್ದರು. ಸುಮಾರು 590 ಮಂದಿ ನೋಂದಾಯಿಸಿಕೊಂಡಿದ್ದರು. ನಂತರ ಅವರಿಗೆ ಕೋವಿಡ್ -19 ಪರೀಕ್ಷೆ ನಡೆಸಲಾಯಿತು. ಈ ಪೈಕಿ ಪ್ರತಿ ಐವರ ಪೈಕಿ ನಾಲ್ವರು ಪ್ರತಿಕಾಯಗಳ ವೃದ್ದಿಯಾಗಿರುವುದುಪತ್ತೆಯಾಗಿದ್ದು. ಇವರೆಲ್ಲರೂ ಕೊರೊನಾ ವೈರಸ್ ಗೆ ತುತ್ತಾಗಿರುವುದು ದೃಢ ಪಟ್ಟಿದೆ. ಹೀಗೆ ಒಟ್ಟು ಶೇ 78 ಜನರು ವೈರಸ್ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ

ಶೇ 40 ರಷ್ಟು ಮಂದಿಗೆ ಕೆಮ್ಮು ಹಾಗೂ ಜ್ವರದಂತಹ ಲಕ್ಷಣಗಳನ್ನು ಸಹ ಹೊಂದಿಲ್ಲ, ಆದರೆ, ಅವರಿಗೆ ರುಚಿ ಹಾಗೂ ವಾಸನೆಯನ್ನು ಗ್ರಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರುಚಿ ಹಾಗೂ ವಾಸನೆಯನ್ನು ಗ್ರಹಿಸುವ ಶಕ್ತಿ ಕಳೆದುಕೊಳ್ಳುವಂತಹ ಲಕ್ಷಣಗಳನ್ನು ಕೊರೊನಾ ವೈರಸ್ ಪತ್ತೆಯ ಅತ್ಯಂತ ವಿಶ್ವಾಸಾರ್ಹ ಸೂಚಕಗಳು ಎಂದು ಪರಿಗಣಿಸಿದ್ದಾರೆ.

ಲಂಡನ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಕೊರೊನಾ ಸೋಂಕಿನ ಎರಡನೇ ಹಂತದ ಪ್ರಸರಣ ಆರಂಭಗೊಳ್ಳುತ್ತಿರುವ ಸಮಯದಲ್ಲಿ ಇಂತಹ ಲಕ್ಷಣಗಳ ಮೂಲಕ ವೈರಸ್ ತಗುಲಿರುವ ಜನರನ್ನು ಸಾಧ್ಯವಾದಷ್ಟು ತ್ವರಿತವಾಗಿ ಗುರುತಿಸಬಹುದು ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಪ್ರೊಫೆಸರ್ ರಾಚೆಲ್ ಬಟರ್ಹ್ಯಾಮ್ ಹೇಳಿದ್ದಾರೆ. ಇಂತಹವರನ್ನು ಗುರುತಿಸಿ ಪರೀಕ್ಷೆ ನಡೆಸುವ ಮೂಲಕ ಸಾಧ್ಯವಾದಷ್ಟು ಸಾಂಕ್ರಾಮಿಕ ಹರಡುವುದನ್ನು ನಿಯಂತ್ರಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯವಾಗಿ ನೀವು ಮನೆಯಲ್ಲಿದ್ದರೆ ಈರುಳ್ಳಿ, ಬೆಳ್ಳುಳ್ಳಿ, ಕಾಫಿ ಹಾಗೂ ಸುಗಂಧ ದ್ರವ್ಯಗಳಂತಹ ವಾಸನೆಯನ್ನು ಗ್ರಹಿಸಲು ಸಾಧ್ಯವಿಲ್ಲ ಎಂಬುದು ದೃಢಪಟ್ಟರೆ ತಕ್ಷಣ ಕೋವಿಡ್ ಪರೀಕ್ಷೆಗೆ ಒಳಗಾಗಲು ತಜ್ಞರು ಸೂಚಿಸುತ್ತಾರೆ.

ಪ್ರಸ್ತುತ ಲಂಡನ್‌ನಲ್ಲಿ ಈ ಮಾನದಂಢಗಳನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ಪ್ರಪಂಚದ ಅನೇಕ ದೇಶಗಳಲ್ಲಿ ಜ್ವರ ಮತ್ತು ಉಸಿರಾಟದ ಲಕ್ಷಣಗಳನ್ನು ಮಾತ್ರ ಪರಿಗಣಿಸುತ್ತಿವೆ. ಜಗತ್ತಿನ ಎಲ್ಲ ಸರ್ಕಾರಗಳು ಈ ಲಕ್ಷಣಗಳನ್ನು ಮಾನದಂಡಗಳನ್ನಾಗಿ ಅಳವಡಿಸಿಕೊಳ್ಳಬೇಕೆಂದು ಲಂಡನ್‌ನ ಸಂಶೋಧಕರು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!