Bengaluru

ವರ್ಷಾಂತ್ಯಕ್ಕೂ ಇಳಿಮುಖವಾಗುವುದಿಲ್ಲ ಕೋವಿಡ್ ಸೋಂಕು -ತಜ್ಞರ ಅಭಿಪ್ರಾಯ

ಬೆಂಗಳೂರು, ಅ 2- ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಇಳಿಮುಖವಾಗಲಿದ್ದು, ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ ಎಂಬ ರಾಜ್ಯದ ಜನತೆಯ ವಿಶ್ವಾಸಕ್ಕೆ ಈ ಸೋಂಕಿನ ರಣಕೇಕೆ ಕೊಡಲಿ ಪೆಟ್ಟು ಹಾಕಿದೆ.

ಈ ವರ್ಷದ ಅಂತ್ಯಕ್ಕಿರಲಿ, ಮುಂದಿನ ವರ್ಷದಲ್ಲೂ ಸೋಂಕು ನಾಪತ್ತೆಯಾಗುವ ಲಕ್ಷಣಗಳಿಲ್ಲ ಎಂದು ಆರೋಗ್ಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಇದು ಇಷ್ಟಕ್ಕೆ ನಿಂತಿಲ್ಲ. ಸೋಂಕಿನ ಜೊತೆಗೆ, ಅದರ ಲಕ್ಷಣ ಕೂಡ ಕಬಂಧಬಾಹು ಚಾಚುತ್ತಿದೆ.

ಇದು ಜನಸಾಮಾನ್ಯರಿಗೆ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಕೆಲ ಕಾಲ ಸೋಂಕು ಮರೆಯಾದಂತೆ ಕಂಡುಬಂದು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ ನೆರೆಹೊರೆಯಲ್ಲೇ ಕೋವಿಡ್‌ ಪ್ರಕರಣ ಪತ್ತೆಯಾಗಿ ಆತಂಕ ಹೆಚ್ಚಿಸುತ್ತಿದೆ.

ಕೋವಿಡ್ ವಾರ್‌ ರೂಮ್ ವಿಶ್ಲೇಷಣೆ ಪ್ರಕಾರ, ಇತ್ತೀಚೆಗೆ ವರದಿಯಾದ ಸೋಂಕಿತರಲ್ಲಿ ಶೇ.97ರಷ್ಟು ಮಂದಿಗೆ ಕಾಯಿಲೆಯ ಲಕ್ಷಣಗಳು ಗೋಚರಿಸಿಲ್ಲ. ಇಲ್ಲಿಯವರೆಗೆ ದಾಖಲಾಗಿರುವ 2 ಲಕ್ಷಕ್ಕೂ ಹೆಚ್ಚಿನ ಸೋಂಕಿತ ಪ್ರಕರಣಗಳ ಪೈಕಿ ಶೇ.80ರಷ್ಟು ಮಂದಿ ಸೋಂಕು ಬಹಿರಂಗವಾಗಿ ಗೋಚರಿಸಿಲ್ಲ.

ರಾಜ್ಯದಲ್ಲಿ ಪ್ರತಿನಿತ್ಯ ಕೋವಿಡ್‌ ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿ ದಾಟುತ್ತಿದೆ. ಈಗಾಗಲೇ ಈ ಮಾರಣಾಂತಿಕ ಸೋಂಕು 9 ಸಾವಿರ ಜನರನ್ನು ಬಲಿ ತೆಗೆದುಕೊಂಡಿದೆ. ಸದ್ಯ ದೇಶದಲ್ಲಿ ಕರ್ನಾಟಕ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಮೂರನೇ ರಾಜ್ಯವಾಗಿದೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶವನ್ನು ಹೊರತುಪಡಿಸಿದರೆ ಕರ್ನಾಟಕವೇ ದೇಶದ ಸೋಂಕಿತರ ಸಂಖ್ಯೆ ಹೆಚ್ಚಿನ ಕೊಡುಗೆ ನೀಡುತ್ತಿದೆ.

ಲಕ್ಷಣಗಳೇ ಇಲ್ಲ: ವಾರ್‌ ರೂಂ ವರದಿ ಪ್ರಕಾರ, ಹಲವು ಜಿಲ್ಲೆಗಳಲ್ಲಿ ಲಕ್ಷಣಗಳೇ ಇಲ್ಲದ ಸೋಂಕಿತರು ಪತ್ತೆಯಾಗಿದ್ದಾರೆ. ಕೊಪ್ಪಳದಲ್ಲಿ ಶೇ 99.9, ಯಾದಗಿರಿ, ಬೀದರ್, ಕೊಡಗು, ಹಾವೇರಿ, ಚಿಕ್ಕಬಳ್ಳಾಪುರ, ಬಳ್ಳಾರಿ, ಚಿತ್ರದುರ್ಗ ಹಾಗೂ ರಾಯಚೂರಿನಲ್ಲಿ ಶೇ 98ಕ್ಕೂ ಅಧಿಕ ಪ್ರಕರಣಗಳಲ್ಲಿ ಸೋಂಕಿತರಿಗೆ ಲಕ್ಷಣಗಳು ಗೋಚರಿಸಿಲ್ಲ.

ವಿಚಿತ್ರ ಲಕ್ಷಣಗಳು: ಕೋವಿಡ್‌ ಸೋಂಕು ಲಕ್ಷಣಗಳು ಈಗ ಕೆಮ್ಮು, ಸೀನು, ಉಸಿರಾಟದ ತೊಂದರೆಗಳಿಗೆ ಸೀಮಿತವಾಗಿಲ್ಲ. ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರ ಹೊಮ್ಮುವ ಹನಿಗಳು 5 ಮೈಕ್ರಾನ್‌ಗಳಿಗಿಂತ ಕಡಿಮೆ ಇದ್ದಲ್ಲಿ ಸೋಂಕು ಗಾಳಿಯಲ್ಲಿ ತೇಲಿ, ಆರು ಅಡಿಗಿಂತ ದೂರ ವ್ಯಾಪಿಸುವ ಸಾಧ್ಯತೆಯಿದೆ ಎಂದು ಆರೋಗ್ಯ ತಜ್ಞರು ಹೊಸ ಗಂಭೀರ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈ ಕಣಗಳು 6 ಅಡಿ ಅಂತರದೊಳಗಡೆಯೇ ಬೀಳುತ್ತವೆ. ಅವು ನೆಲ, ಬಾಗಿಲು, ಟೇಬಲ್ ಮೇಳೆ ಬಿದ್ದಲ್ಲಿ ಅದನ್ನು ಸ್ಪರ್ಶಿಸಿದವರು ಕೂಡ ಸೋಂಕಿತರಾಗುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.

2021ಕ್ಕೆ ಶೇ.50ರಷ್ಟು ಜನರಿಗೆ ಸೋಂಕು

ಇತ್ತೀಚೆಗೆ ಭಾರತೀಯ ಸಂಶೋಧನಾ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್‌ಸಿ)ಯ ವರದಿ ಪ್ರಕಾರ, 2021ರ ಫೆಬ್ರವರಿ, ಮಾರ್ಚ್‌ನಲ್ಲಿ ಸೋಂಕು ಇನ್ನಷ್ಟು ಏರಿಕೆಯಾಗಲಿದ್ದು, ಶೇ.50ರಷ್ಟು ಜನರಿಗೆ ಸೋಂಕು ತಗುಲಲಿದೆ.

ವ್ಯಕ್ತಿಗಳು ಕೆಮ್ಮಿದಾಗ ಮತ್ತು ಸೀನಿದಾಗ 5 ಮೈಕ್ರಾನ್‌ಗಿಂತ ಸಣ್ಣ ಕಣಗಳು ಆರೋಗ್ಯವಂತ ವ್ಯಕ್ತಿಯ ದೇಹ ಸೇರುತ್ತವೆ. ಹಾಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಮುಖಗವಸು ಧರಿಸಬೇಕು.

– ಡಾ. ಸುದರ್ಶನ್ ಎಂ.ಕೆ, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ

– ಕೋವಿಡ್ ದೊಡ್ಡ ಕುಟುಂಬದಂತೆ. ಅದಕ್ಕೆ ಎಲ್ಲ ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುವ ಸಾಮರ್ಥ್ಯವಿದೆ. ಶೀತ, ಜ್ವರ, ಕೆಮ್ಮಿನ ಜತೆಗೆ ತಲೆನೋವು ಭೇದಿ ಸೇರಿದಂತೆ ವಿವಿಧ ಲಕ್ಷಣಗಳು ಸೋಂಕಿತರಿಗೆ ಕಾಣಿಸಿಕೊಳ್ಳುತ್ತದೆ.

– ಡಾ. ಸತ್ಯನಾರಾಯಣ ಎಂ.ಎಸ್, ಬಿಎಂಸಿಆರ್‌ಐ ಪ್ರಧಾನ ಸಂಶೋಧನಾಧಿಕಾರಿ

Related Articles

Leave a Reply

Your email address will not be published. Required fields are marked *

Back to top button
error: Content is protected !!