Entertainment

ಚಿತ್ರ ಮಂದಿರಕ್ಕೆ ಬನ್ನಿ ಅಂತ ಜನರನ್ನು ಒತ್ತಾಯಿಸಲ್ಲ: ಶಿವರಾಜಕುಮಾರ

ಮೈಸೂರು, ಅ 02- ಚಿತ್ರಮಂದಿರಗಳ ಪುನಾರಂಭಕ್ಕೆ ಸರ್ಕಾರ ಅನುಮತಿ ನೀಡಿರುವುದಕ್ಕೆ ನಟ ಶಿವರಾಜಕುಮಾರ ಸಂತಸ ವ್ಯಕ್ತಪಡಿಸಿದ್ದಾರೆ.

ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದ ಶಿವರಾಜ‌ಕುಮಾರ ಸುದ್ದಿಗಾರರೊಡನೆ ಮಾತನಾಡಿ, ‘ಚಿತ್ರಮಂದಿರಗಳು ರೀ-ಓಪನ್ ಆಗುತ್ತಿರುವುದು ತುಂಬಾ ಖುಷಿ ವಿಚಾರ. ಆದರೆ ಎಷ್ಟು ಜನ ಬರಬೇಕು ಅಂತ ನಟನಾಗಿ ನಾನು ಹೇಳೋಕಾಗೋಲ್ಲ’ ಎಂದಿದ್ದಾರೆ.

‘ನಟನಾಗಿ ನಾನು ಶೂಟಿಂಗ್ ಮಾಡಬಹುದು ಆಕ್ಟಿಂಗ್ ಮಾಡಬಹುದು. ಚಿತ್ರ ಪ್ರದರ್ಶನ ಹಾಗೂ ಬಿಡುಗಡೆ ಬಗ್ಗೆ ನಾನೇನು ಹೇಳುವುದಿಲ್ಲ. ಅದಕ್ಕೆ ಅಂತ ನಿರ್ಮಾಪಕರಿದ್ದಾರೆ ಅವರೇ ತೀರ್ಮಾನ ಮಾಡುತ್ತಾರೆ’ ಎಂದು ಹೇಳಿದ್ದಾರೆ.

‘ಸಿನಿಮಾ ನೋಡಲು ಬನ್ನಿ ಎಂದು ನಾನು ಪ್ರೇಕ್ಷಕರನ್ನು ಕರೆಯಬಹುದು, ಆದರೆ ರಿಸ್ಕ್ ತೆಗೆದುಕೊಂಡು ಬಂದು ಸಿನಿಮಾ ನೋಡಿ ಎನ್ನಲಾಗುವುದಿಲ್ಲ, ಆರೋಗ್ಯ ಬಹಳ ಮುಖ್ಯ, ಜನರು ತಮ್ಮ ಸುರಕ್ಷತೆ ನೋಡಿಕೊಂಡು ಚಿತ್ರಮಂದಿರಗಳಿಗೆ ಬರಲಿ’ ಎಂದು ತಿಳಿಸಿದ್ದಾರೆ.

‘ಸಿನಿಮಾ ಸಹ ಒಂದು ಉದ್ಯಮ. ಎಲ್ಲ ಉದ್ಯಮದಂತೆ ಇದು ಸಹ ನಿಧಾನವಾಗಿ ಮೇಲೇಳಬೇಕು. ಯಾವ ಸಿನಿಮಾ ಮೊದಲು ಬರಬೇಕು ಎಂದು ಸಹ ನಾನು ಹೇಳಲಾರೆ. ಎಲ್ಲ ಸಿನಿಮಾಗಳು ಒಂದೆ. ಅದೊಂದು ಮ್ಯಾಜಿಕ್ ರೀತಿ ಇರುತ್ತೆ ಯಾವ ಸಿನಿಮಾ ಬೇಕಾದರೂ ಗೆಲ್ಲಬಹುದು’ ಎಂದು ಶಿವರಾಜಕುಮಾರ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!