Bengaluru

ಎಷ್ಟೇ ಅಪ ಪ್ರಚಾರ ಮಾಡಿದರೂ ಗಾಂಧೀಜಿ ವರ್ಚಸ್ಸಿಗೆ ಧಕ್ಕೆ ಸಾಧ್ಯವಿಲ್ಲ: ಮಹಾತ್ಮಾ ಮತ್ತಷ್ಟು ಪ್ರಸ್ತುತರಾಗುತ್ತಲೇ ಹೋಗುತ್ತಾರೆ : ಡಾ. ಗುರುರಾಜ ಕರ್ಜಗಿ

ಬೆಂಗಳೂರು, ಅ 2- ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅವರ ಬಗ್ಗೆ ಊಹಾಪೋಹದ ಸುದ್ದಿಗಳನ್ನು ಹಬ್ಬಿಸಿ ತಮ್ಮ ಜೀವನ ಕಟ್ಟಿಕೊಳ್ಳುವವರ ನಡುವೆಯೂ ಗಾಂಧೀಜಿ ಈಗಲೂ ಪ್ರಸ್ತುತರಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಗಾಂಧೀಜಿ ಬೆಳಕು ಪ್ರಖರವಾಗುತ್ತಲೇ ಹೋಗುತ್ತದೆ ಎಂದು ಹಿರಿಯ ಶಿಕ್ಷಣ ತಜ್ಞ, ಗಾಂಧೀವಾದಿ ಡಾ. ಗುರುರಾಜ ಕರ್ಜಗಿ ಪ್ರತಿಪಾದಿಸಿದ್ದಾರೆ.

ಗಾಂಧೀಜಿ ಅವರ 150ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಯುಎನ್ಐ ಕನ್ನಡ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಅವರು, ಗಾಂಧೀಜಿ ಅವರಿಗೆ ಈಗ 150 ವರ್ಷ ಎಂದರೆ ಅದೊಂದು ನಿಜಕ್ಕೂ ವಿಶೇಷ. ಒಂದೂವರೆ ಶತಮಾನದ ನಂತರವೂ ಗಾಂಧೀಜಿ ನಮ್ಮ ಮುಂದೆ ಇದ್ದಾರೆ. ಇರುತ್ತಾರೆ. ಮುಂದೆ ಗಾಂಧಿ ನಮ್ಮ ಮುಂದೆ ನಡೆದಿದ್ದ ಎಂಬುದೇ ವಿಸ್ಮಯವಾಗುತ್ತದೆ. ತಮಗೆ ಹಲವು ವಿಷಯಗಳು ಸದಾ ಕಾಡುತ್ತಿರುತ್ತವೆ. ಕೆಲವು ಗ್ರಂಥಗಳು, ಕೆಲವು ವ್ಯಕ್ತಿಗಳಿಗೆ ದಿನ ಕಳೆದಂತೆ ತನ್ನ ಮಹತ್ವ ಕಡಿಮೆಯಾಗುತ್ತವೆ. ಮನೆಯಲ್ಲಿ ಯಾರಾದರೊಬ್ಬರು ಸತ್ತರೆ ಅವರಿಲ್ಲದೇ ಬದುಕು ಸಾಧ್ಯವಿಲ್ಲ ಎನಿಸುತ್ತದೆ. ಹತ್ತು ದಿನಗಳಲ್ಲಿ ನೋವಿನ ತೀವ್ರತೆ ಕಡಿಮೆಯಾಗುತ್ತದೆ. ಎರಡು ವರ್ಷಗಳಲ್ಲಿ ಅವರನ್ನು ಬಹುತೇಕ ಮರೆತುಬಿಟ್ಟಿರುತ್ತೇವೆ. ಹೊಸದಾಗಿ ಕಾರು ಖರೀದಿಸಿದಾಗ ಇದ್ದ ಸಂಭ್ರಮ ದಿನಗಳೆದಂತೆ ಕಡಿಮೆಯಾಗುತ್ತದೆ. ಒಳ್ಳೆಯ ಕ್ಷಣಗಳು, ದುಃಖ ಕೂಡ ಕಡಿಮೆಯಾಗುತ್ತದೆ. ಆದರೆ ಕೆಲ ಪುಸ್ತಕಗಳು, ಕೆಲ ಚಿಂತನೆಗಳು ದಿನಗಳೆದಂತ ಪ್ರಖವಾಗುತ್ತಲೇ ಹೋಗುತ್ತದೆ. ಸ್ವಾಮಿವಿವೇಕಾನಂದರು ಮೃತಪಟ್ಟಾಗ ಅವರಿಗೆ 39 ವರ್ಷ. ಅವರಿಗೆ ಆಗ ಇದ್ದ ಶಿಷ್ಯರ ಸಂಖ್ಯೆ ಈಗಿನ ಕಾಲಘಟ್ಟಕ್ಕೆ ಹೋಲಿಸಿದರೆ ಸಾವಿರ ಪಟ್ಟು ಹೆಚ್ಚಾಗಿದೆ. 1948 ರಲ್ಲಿ ಗಾಂಧೀಜಿ ಗುಂಡೇಟಿಗೆ ಬಲಿಯಾದಾಗ ಗಾಂಧೀಜಿ ಅವರಿಗೆ ಎಷ್ಟು ಜನರ ಬೆಂಬಲ ಇತ್ತೋ ಗೊತ್ತಿಲ್ಲ. ಈಗ ಅವರನ್ನು ಬೆಂಬಲಿಸುವ, ಅವರ ಮಾರ್ಗ ಅನುಸರಿಸುವ ಸಂಖ್ಯೆ ಅಗಾಧವಾಗಿದೆ. ಅವರ ಚಿಂತನೆಗಳು, ಬದುಕು ಎಲ್ಲಾ ಕಾಲಕ್ಕೂ ಪ್ರಸ್ತುತ. ಹೀಗಾಗಿ ಗಾಂಧೀಜಿ ವ್ಯಕ್ತಿಯಾಗಿ ಉಳಿದಿಲ್ಲ. ಅವರು ಸಾರ್ವಕಾಲಿಕ ಸತ್ಯದ ಪ್ರತಿನಿಧಿಯಾಗಿ ನಮ್ಮ ಮುಂದೆ ನಿಂತಿದ್ದಾರೆ.

ದುರದೃಷ್ಟವೆಂದರೆ ಮಹಾತ್ಮಾಗಾಂಧೀಜಿ ನಮ್ಮ ಭಾರತೀಯರಿಗೆ ದೂರವಾಗುತ್ತಿದ್ದಾರೆ. ಅದೃಷ್ಟವೆಂದರೆ ವಿಶ್ವಕ್ಕೆ ಹತ್ತಿರವಾಗುತ್ತಿದ್ದಾರೆ. ಗಾಂಧೀಜಿ ಅವರನ್ನು ಸರಿಯಾಗಿ ಸಮೂಹಕ್ಕೆ ತಲುಪಿಸುವ ಕೆಲಸ ಆಗಿಲ್ಲ. ಇದರಲ್ಲಿ ನಮ್ಮ ಹಿರಿಯರು ಮತ್ತು ನಾವೆಲ್ಲಾ ಸೋತಿದ್ದೇವೆ. ಹಾಗೆಂದು ಗಾಂಧೀಜಿಗೆ ಪ್ರಚಾರ ಬೇಕಿಲ್ಲ. ಗಾಂಧೀಜಿ ಬದುಕಿದ್ದಾಗಲೇ ಪ್ರಚಾರ ಬಯಸಲಿಲ್ಲ. ಗಾಂಧೀ ಸತ್ಯದ ಪ್ರತೀಕ. ಸ್ವತಃ ನಾನೂ ಸಹ ಗಾಂಧೀಜಿ ಅವರನ್ನು 9 ನೇ ತರಗತಿಲ್ಲಿದ್ದಾಗ ತುಂಬಾ ತೀಕ್ಷ್ಣವಾಗಿ ಟೀಕಿಸಿ ಬರೆದಿದ್ದೆ. ಆದರೆ ಆಗ ನಮ್ಮ ಮಾಸ್ತರರು ನನ್ನನ್ನು ಕರೆದು ನಿನ್ನ ಭಾಷೆ ಚೆನ್ನಾಗಿದೆ. ಆದರೆ ಗಾಂಧೀಜಿ ಬಗ್ಗೆ ಓದಿ ನಂತರ ಲೇಖನ ಬರಿ ಎಂದು ಹೇಳಿ ನನಗೆ ಸತ್ಯಾನ್ವೇಷಣೆ ಪುಸ್ತಕ ಕೊಟ್ಟರು. ಪುಸ್ತಕ ಓದಿದ ನಂತರ ನನ್ನನ್ನೇ ನಾನು ದಂಡಿಸಿಕೊಳ್ಳುವಷ್ಟು ಸಿಟ್ಟು ನನಗೆ ಬಂದಿತ್ತು. ಬಳಿಕ ಗಾಂಧೀಜಿ ಕುರಿತು ಸಾಕಷ್ಟು ಅಧ್ಯಯನ ಮಾಡಿದೆ. ಇಲ್ಲಿ ಒಂದು ಮಾತು ವಿಷಯ ಹಂಚಿಕೊಳ್ಳುತ್ತೇನೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಕರ್ ಲೆಸ್ ಬಕ್ ಎಂಬ ಮಹಿಳಾ ಲೇಖಕಿ ಬರೆಯುತ್ತಾರೆ. ಗಾಂಧೀಜಿ ನಿಮ್ಮವರು ಎಂದು ಎದೆತಟ್ಟಿ ಹೇಳಿಕೊಳ್ಳಬೇಕು ಎಂದು ಭಾರತೀಯರಿಗೆ ಕರೆ ನೀಡಿದ್ದಾರೆ. ನಮ್ಮಲ್ಲಿ ಗಾಂಧೀಜಿ ಬಗ್ಗೆ ಅಂತೆ ಕಂತೆಗಳ ಕಥೆ ಹುಟ್ಟಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಡಾ.ಗುರುರಾಜ ಕರ್ಜಗಿ ತೀವ್ರ ವಿಷಾದ ವ್ಯಕ್ತಪಡಿಸಿದರು.

ಗಾಂಧೀಜಿ ಎಲ್ಲವನ್ನೂ ಕಳೆದುಕೊಂಡು ಓಡಾಡುತ್ತಿದ್ದರು. ಆದರೆ ನಾವು ಗಾಂಧೀಜಿ ಚಿತ್ರಕ್ಕೆ ಕಟ್ಟು ಹಾಕಿ ಇಟ್ಟಿದ್ದೇವೆ. ಹೊರಗಡೆ ಬರಲು ಬಿಡಲಿಲ್ಲ. ಗಾಂಧೀಜಿ ನೀತಿಪಾಠದ ಮೇಸ್ತರಾಗಿಬಿಟ್ಟರೆ ಎಂಬ ಕಳವಳ ತಮ್ಮನ್ನು ಸದಾ ಕಾಡುತ್ತಿರುತ್ತದೆ. ಗಾಂಧೀಜಿಯನ್ನು ನಾವು ಕನ್ನಡಿ ಮಾಡಿದ್ದೇವೆ. ಗಾಜು ಮಾಡಲಿಲ್ಲ. ಗಾಜು ಮೂಲಕ ಹೊರಗಿನ ಬೆಳಕು ಒಳಗಡೆ ಬರುತ್ತದೆ. ಇದೇ ರೀತಿ ಗಾಂಧೀಜಿ ನಮ್ಮ ಮನಸ್ಸುಗಳನ್ನು ಒಳಹೊಕ್ಕಲು ನಾವು ಬಿಡಲಿಲ್ಲ. ಗಾಂಧೀಜಿ ನಮ್ಮ ಮುಂದೆ ಇರುವ ಪ್ರತಿಮೆಯಾಗಿದ್ದಾರೆಯೇ ಹೊರತು ಸಂಕೇತವಾಗಿಲ್ಲ. ಬರಾಕ್ ಓಬಾಮ “ ತಾವು ಅಮೆರಿಕ ಅಧ್ಯಕ್ಷರಾಗಲು ಗಾಂಧೀಜಿ ಕಾರಣ ಎನ್ನುತ್ತಾರೆ” , ಇದಕ್ಕಿಂತ ಉದಾಹರಣೆ ಬೇಕೆ ಎಂದು ಪ್ರಶ್ನಿಸಿದರು ಡಾ. ಗುರುರಾಜ ಕರ್ಜಗಿ.

ಗಾಂಧೀಜಿ ದೇಶ ವಿಭಜನೆಗೆ ಕಾರಣ ಎನ್ನುವ ಅಪ ಪ್ರಚಾರ ಮಾಡಲಾಗುತ್ತಿದೆ. ನನ್ನ ದೇಹದ ಮೇಲೆ ದೇಶ ವಿಭಜನೆ ಆಗಲಿ ಎಂದು ಗಾಂಧೀಜಿ ಆಗಲೇ ಹೇಳಿದ್ದರು. ಆದರೆ ಕೆಲವರು ಗಾಂಧೀಜಿ ಬಗ್ಗೆ ಹಾರಿಕೆ ಸುದ್ದಿಗಳನ್ನು ಹಬ್ಬಿಸಿ ತಮ್ಮ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಯಾರು ಏನೇ ಮಾಡಿದರೂ ಗಾಂಧೀಜಿ ವ್ಯಕ್ತಿತ್ವ, ವರ್ಚಸ್ಸಿಗೆ ಮಸಿ ಬಳಿಯಲು ಸಾಧ್ಯವಿಲ್ಲ ಎಂದರು.

ನಮಗೆ ಸ್ವಾತಂತ್ರ್ಯ ದೊರೆತು ಏಳು ದಶಕಗಳು ಪೂರ್ಣಗೊಂಡಿದೆ. ಆದರೆ ಗಾಂಧೀಜಿ ಕಂಡ ಕನಸಿನ ಭಾರತ ನಿರ್ಮಾಣವಾಗಿಲ್ಲ. ಅವರ ಪರಿಕಲ್ಪನೆಗಿಂತ ದೂರ ಬಂದಿದ್ದೇವೆ. ಗಾಂಧೀಜಿ ಸಂಭ್ರಮದ ಭಾರತದ ಕನಸು ಕಂಡಿರಲಿಲ್ಲ. ರಾಕೆಟ್ ಉಡಾವಣೆ ಮಾಡಬೇಕು, ಕಣ್ಣು ಕೋರೈಸುವಂತಹ ಅಭಿವೃದ್ಧಿಯಾಗಬೇಕು ಎಂಬ ಪರಿಕಲ್ಪನೆ ಗಾಂಧೀಜಿ ಅವರದ್ದಾಗಿರಲಿಲ್ಲ. ಜೀವನ ಸರಳ, ಸಮೃದ್ಧವಾಗಿಬೇಕು ಎನ್ನುವ ಕನಸು ಹೊತ್ತಿದ್ದರು. ದೊಡ್ಡ ದೊಡ್ಡ ನೀರಾವರಿ ಯೋಜನೆಗಳು, ಸಣ್ಣ ಕೈಗಾರಿಕೆಗಳನ್ನು ಮಾಡಿ, ಹಳ್ಳಿಗಳನ್ನು ಉದ್ದಾರ ಮಾಡಿ ಎಂದಿದ್ದರು. ಆದರೆ ನಾವು ನಗರ ಕೇಂದ್ರೀತ ಆಡಳಿತ ವ್ಯವಸ್ಥೆಗೆ ಒತ್ತು ನೀಡಿದ್ದೇವೆ ಎಂದರು.

ಗಾಂಧೀಜಿ ಅವರ ಬದುಕು, ಬರಹ, ಜೀವನ ಶೈಲಿ ಕುರಿತು ಶಾಲಾ ಹಂತದಲ್ಲೇ ಅಧ್ಯಯನಕ್ಕೆ ಅವಕಾಶ ನೀಡಬೇಕು. ಅಧ್ಯಯನದ ಅವಕಾಶ ಇದ್ದರೆ ಮಾತ್ರ ಮಕ್ಕಳು ಓದಿ ಪರೀಕ್ಷೆ ಬರೆಯುತ್ತಾರೆ. ಗಾಂಧೀಜಿ ಅವರನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಗಾಂಧೀಜಿ ಅವರನ್ನು ಮುಟ್ಟಲು ತಂತ್ರಜ್ಞಾನ ತೀರಾ ಅಗತ್ಯ. ತಾವು ಗೊಖಲೆ ಇನ್ಸ್ಟಿಟ್ಯೂಟ್ ನಲ್ಲಿ ಆರು ದಿನಗಳ ಕಾಲ ಹೀಗಿದ್ದರು ನಮ್ಮ ಬಾಪು ಎನ್ನುವ ಉಪನ್ಯಾಸ ನೀಡಿದ್ದೆ. ಅದನ್ನು ನನ್ನ ಶಿಷ್ಯರು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದರು. ಇದನ್ನು ನೋಡಿ ಸ್ವತಃ ತಮಗೆ 25 ಸಾವಿರಕ್ಕೂ ಹೆಚ್ಚು ಇಮೇಲ್ ಗಳು ಬಂದಿದ್ದರು. ಕೋಟ್ಯಾಂತರ ಜನ ನನ್ನ ಉಪನ್ಯಾಸ ಕೇಳಿದ್ದರು. ಬಹಳಷ್ಟು ಮಂದಿ ಗಾಂಧೀಜಿ ಕುರಿತ ಪರಿಕಲ್ಪನೆಯನ್ನೇ ಬದಲಿಸಿಕೊಂಡಿದ್ದಾರೆ. ಮಾತಿನಿಂದ ಮುಟ್ಟಲಾಗದ್ದು, ತಂತ್ರಜ್ಞಾನದ ಮೂಲಕ ತಲುಪಿದ್ದೇವೆ. ಗಾಂಧೀಜಿಯನ್ನು ಯುವಸಮೂಹಕ್ಕೆ ತಲುಪಿಸಲು ಇದೇ ಮಾರ್ಗ ಸೂಕ್ತ ಎಂದರು.

ಜಾಗತಿಕ ಭಯೋತ್ಪಾದನೆ ನಿರ್ಮೂಲನೆಗೆ ಗಾಂಧೀಜಿ ಒಬ್ಬರೇ ಪರಿಹಾರವಾಗುತ್ತಾರೆ. ಶುಮಾಕರ್ ಎಂಬುವರು ಚಂದವಾಗಿ ಬರೆದಿದ್ದಾರೆ. ಜಗತ್ತಿನಲ್ಲಿ ಎರಡು ಮಾದರಿಗಳಿವೆ. ಒಂದು ಹಿಟ್ಲರ್ ಮತ್ತೊಂದು ಥ್ಯಾಂಕ್ ಗಾಡ್ ದೇರ್ ಇಸ್ ಅನದರ್ ಬ್ಯಾಲೆನ್ಸಿಂಗ್ ಪೋರ್ಸ್ ದಟ್ ಇಸ್ ಗಾಂಧೀ ಎಂದು ಹೇಳಿದರು. ಎದೆಗೆ ಒದ್ದವರಿಗೆ ಚಪ್ಪಲಿ ಮಾಡಿಕೊಡುವುದು, ಗುಂಡುಹೊಡೆದವನ ಮುಂದೆ ಹೇ ರಾಮ್ ಎಂದು ಹೇಳಲು ಮತ್ಯಾರಿಂದ ಸಾಧ್ಯ.

ನೆಪೋಲಿಯನ್ ಬೊನೋಪಾರ್ಟಿಯನ್ನು ಹಿಡಿದು ಸೆಂಟ್ ಹೆಲೆನಾ ದ್ವೀಪದಲ್ಲಿ ಕೈದಿಯಾಗಿ ಇಟ್ಟಿರುತ್ತಾರೆ. ಆಗ ಸ್ನೇಹಿತನಿಗೆ ನೆಪೋಲಿಯನ್ ಹೇಳುತ್ತಾನೆ ನಾನು ಜಗತ್ತನ್ನು ಗೆಲ್ಲಬೇಕು ಎಂದು ಹೊರಟೆ. ಆದರೆ ಸಾಧ್ಯವಾಗಲಿಲ್ಲ. ಜನ ಶಾಂತಿಮಂತ್ರ ಜಪಿಸಿದ ಗಡ್ಡಬಿಟ್ಟ ಏಸು ಕ್ರಿಸ್ತನ ಹಿಂದೆ ಬಿದ್ದರು. ಜನ ಶಾಂತಿಗೆ ಒತ್ತು ನೀಡುತ್ತಾರೆ ಎಂದು ಹೇಳಿಕೊಂಡಿದ್ದರು. ಗಾಂಧೀಜಿ ಸಹ ಇದೇ ಹಾದಿಯಲ್ಲಿ ಸಾಗಿದವರು.

ಗಾಂಧೀಜಿ ಅವರಿಗೆ ಈಗ 150 ವರ್ಷ. ಆದರೆ ಅವರು 125 ವರ್ಷ ಬದುಕಬೇಕು ಎಂಬ ಆಪೇಕ್ಷೆ ಹೊಂದಿದ್ದರು. ಇದನ್ನು ಅವರೇ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ನಾನು ಅಷ್ಟು ವರ್ಷ ಬದುಕುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಜನತೆ ನನ್ನನ್ನು ಮಹಾತ್ಮಾ ಎಂದು ಕರೆದರು. ಆದರೆ ಅದೇ ಜನ ನನ್ನನ್ನು ಮಲಹೊರುವವನಿಗಿಂತಲೂ ಕಡೆಯಾಗಿ ಕಂಡರು ಎಂದು ಗಾಂಧೀಜಿ ನೊಂದುಕೊಂಡು ಹೇಳಿದ್ದನ್ನು ಡಾ. ಗುರುರಾಜ ಕರ್ಜಗಿ ಸ್ಮರಿಸಿಕೊಂಡರು

Related Articles

Leave a Reply

Your email address will not be published. Required fields are marked *

Back to top button
error: Content is protected !!