Hathras

ಹತ್ರಾಸ್ ಬಾಧಿತೆಯ ಮೇಲೆ ಅತ್ಯಾಚಾರವೇ ನಡೆದಿಲ್ಲ; ಉತ್ತರ ಪ್ರದೇಶ ಎಡಿಜಿ

ಲಕ್ನೋ, ಅ 1- ದೇಶಾದ್ಯಂತ ಆಕ್ರೋಶಕ್ಕೆಕಾರಣವಾಗಿರುವ ಹತ್ರಾಸ್ ಘಟನೆಗೆ ಸಂಬಂಧಿಸಿದಂತೆ ಮೃತ ಯುವತಿಯ ಮರಣೋತ್ತರ ಪರೀಕ್ಷಾ ವರದಿ ಬಿಡುಗಡೆಯಾಗಿದ್ದು ವಿಧಿ ವಿಜ್ಞಾನ ವರದಿಯಲ್ಲಿ ಕುತೂಹಲ ಕಾರಿ ಅಂಶಗಳು ಬೆಳಕಿಗೆ ಬಂದಿವೆ. ಬಾಧಿತ ಯುವತಿಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ಈಗ ಹೇಳಲಾಗಿದೆ.
ಕಳೆದ ತಿಂಗಳ 14ರಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಬಾಧಿತ ಯುವತಿ ದೆಹಲಿಯ ಸಪ್ದರ್ ಜಂಗ್ ಆಸ್ಪತ್ರೆಯಲ್ಲಿ ಎರಡು ವಾರಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾಳೆ.
ಈ ಕುರಿತು ಉತ್ತರ ಪ್ರದೇಶ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ( ಎಡಿಜಿಪಿ) ಪ್ರಶಾಂತ ಕುಮಾರ ಮಾತನಾಡಿ, ಫೋರೆನ್ಸಿಕ್ ವರದಿಯಲ್ಲಿ ಯುವತಿಯ ದೇಹದಲ್ಲಿ ಅತ್ಯಾಚಾರ ನಡೆದಿದೆ ಎಂದು ದೃಢಪಡಿಸುವಂತಹ ಅಂಶ ಕಂಡುಬಂದಿಲ್ಲ, ಬಾಧಿತೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಎಫ್ ಎಸ್ ಎಲ್ ವರದಿ ಸ್ಪಷ್ಟಪಡಿಸಿದೆ ಎಂದು ಹೇಳಿದ್ದಾರೆ.
ಜೊತೆಗೆ ರಾಜ್ಯದಲ್ಲಿ ಜಾತಿಗಳ ನಡುವೆ ಬೆಂಕಿ ಹಚ್ಚಲು ಇಂತಹ ಸುಳ್ಳು ಸುದ್ದಿ ಹಬ್ಬಿಸಿರುವುದು ಇದರಿಂದ ಸ್ಪಷ್ಟವಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಆದೇ ರೀತಿ ಗುರುವಾರ ಬಾಧಿತೆಗೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆಯಾಗಿದ್ದು, ಆಕೆಯ ನಾಲಿಗೆ ಕತ್ತರಿಸಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಪ್ರಶಾಂತ ಕುಮಾರ ಹೇಳಿದ್ದಾರೆ. ಒಂದು ಕಡೆ ಬಾಧಿತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸುದ್ದಿಗಳು ಹರಡಿರುವಾಗ ಎಡಿಜಿಪಿ ಈ ಹೇಳಿಕೆ ನೀಡಿರುವುದು ಮತ್ತು ಮಧ್ಯರಾತ್ರಿಯ ನಂತರ ಪೀಡಿತೆಯ ಶವವನ್ನು ಆಕೆಯ ಕುಟುಂಬದವರಿಗೆ ತಿಳಿಸದೇ ಉತ್ತರ ಪ್ರದೇಶ ಪೋಲೀಸರು ಲಗುಬಗೆಯಿಂದ ಸುಟ್ಟು ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಯುವತಿಯ ದೇಹದ ಮೇಲೆ ಗಾಯಗಳಾಗಿರುವುದು ಮಾತ್ರ ಬೆಳಕಿಗೆ ಬಂದಿದೆ ಎಂದು ತಿಳಿಸಲಾಗಿದೆ.
ಈ ಘಟನೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ಪರಿಗಣಿಸಿವೆ. ಈ ಹಿನ್ನಲೆಯಲ್ಲಿ ಬಾಧಿತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಗುರುವಾರ ಮಧ್ಯಾಹ್ನ ಪಾದಯಾತ್ರೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕರುಗಳಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಂಧನದಿಂದ ಪ್ರದೇಶದಲ್ಲಿ ಉದ್ರಿಕ್ತ ಪರಿಸ್ಥಿತಿ ಸೃಷ್ಟಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!