Sports

ಈ ಬಾರಿ ಐಪಿಎಲ್‌ ಗೆಲ್ಲುವ ನೆಚ್ಚಿನ ತಂಡ ಆರ್‌ಸಿಬಿ: ದಿಲೀಪ‌ ವೆಂಗಸರ್ಕರ

ನವದೆಹಲಿ, ಅ.1-
ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭ ಕಂಡಿದೆ. ಆಡಿದ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಎರಡರಲ್ಲಿ ಜಯ ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ಚೊಚ್ಚಲ ಐಪಿಎಲ್‌ ಗೆಲ್ಲುವ ನೆಚ್ಚಿನ ತಂಡವಾಗಿ ಆರ್‌ಸಿಬಿ ಈ ಬಾರಿ ಭರವಸೆಯನ್ನು ಮೂಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಆಯ್ಕೆದಾರರ ಸಮತಿಯ ಮಾಜಿ ಮುಖ್ಯಸ್ಥ ದಿಲೀಪ್‌ ವೆಂಗಸರ್ಕಾರ್‌ ಅವರು ಈ ಬಾರಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಯಜ್ವೇಂದ್ರ ಚಹಲ್‌ ಮಿಂಚಲಿದ್ದಾರೆ ಎಂದು ಹೇಳಿದ್ದಾರೆ.
“ಟಿ20 ಮಾದರಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಯಾವುದೆಂದು ಹೇಳುವುದು ತುಂಬಾ ಕಷ್ಟ. ಆದರೆ, ಈ ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲಲಿದೆ. ಏಕೆಂದರೆ ಅವರು ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಯಜ್ವೇಂದ್ರ ಚಹಲ್‌ ತಂಡದಲ್ಲಿ ಉತ್ತಮ ಪ್ರದರ್ಶನ ತೋರಲಿದ್ದಾರೆ. ಅಲ್ಲದೆ, ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ ವಿರುದ್ಧ ನವದೀಪ್‌ ಸೈನಿ ಬೌಲಿಂಗ್‌ ಅದ್ಭುತವಾಗಿತ್ತು. ಈ ಎಲ್ಲಾ ಅಂಶಗಳೊಂದಿಗೆ ಟೂರ್ನಿಯಲ್ಲಿ ಆರ್‌ಸಿಬಿ ಪಯಣ ನೋಡಲು ಉತ್ಸುಕನಾಗಿದ್ದೇನೆ,” ಎಂದು ವೆಂಗಸರ್ಕರ‌ ತಿಳಿಸಿದ್ದಾರೆ.
“ಆರ್‌ಸಿಬಿ ಈ ಬಾರಿ ಐಪಿಎಲ್‌ ಗೆಲ್ಲುವ ನಚ್ಚಿನ ತಂಡವಾಗಿದೆ. ಆದರೆ, ಇನ್ನುಳಿದಂತೆ ಎಕ್ಸ್, ವೈ ಅಥವಾ ಝಡ್‌ ತಂಡಗಳು ಪ್ರಶಸ್ತಿ ಗೆಲ್ಲಲಿದೆ ಎಂಬುದನ್ನು ನಾನು ಹೇಳುವುದಿಲ್ಲ. ಇವುಗಳ ನಡುವೆ ಆರ್‌ಸಿಬಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ,” ಎಂದು ಅವರು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರು ಬಾರಿ ಫೈನಲ್‌ ತಲುಪಿದ್ದರೂ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. 2016ರಲ್ಲಿ ಕೊನೆಯ ಬಾರಿ ಫೈನಲ್‌ ತಲುಪಿತ್ತು. ಆದರೆ, ಅಂದಿನಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಕಳೆದ ಆವೃತ್ತಿಯಲ್ಲಿ 14 ಪಂದ್ಯಗಳಿಂದ ಕೇವಲ ಐದರಲ್ಲಿ ಮಾತ್ರ ಆರ್‌ಸಿಬಿ ಜಯ ಸಾಧಿಸಿತ್ತು.
ಆರ್‌ಸಿಬಿ ಉತ್ತಮ ಶ್ರೇಯಾಂಕದ ಪ್ರತಿಭೆಗಳನ್ನು ಹೊಂದಿದ್ದರೂ ಇದುವರೆಗೂ ಒತ್ತಡವನ್ನು ಮೆಟ್ಟಿ ನಿಂತು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಕ್ರಿಸ್‌ ಗೇಲ್‌, ನಾಯಕ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ನಂತಹ ಶ್ರೇಷ್ಠ ಆಟಗಾರರನ್ನು ಹೊಂದಿದ್ದರೂ ಇದುವರೆಗೂ ಆರ್‌ಸಿಬಿ ಅಗ್ರ ಸ್ಥಾನ ಅಲಂಕರಿಸಲು ಸಾಧ್ಯವಾಗಿಲ್ಲ. ಈ ಹಿಂದೆ ಆರ್‌ಸಿಬಿಯ ಬೌಲಿಂಗ್‌ ವಿಭಾಗ ಪ್ರಶ್ನಾತೀತವಾಗಿತ್ತು. ಮಿಚೆಲ್‌ ಸ್ಟಾರ್ಕ್‌ ಗಾಯದಿಂದಾಗಿ ತಂಡಕ್ಕೆ ಬಹು ದೊಡ್ಡ ಹೊಡೆತ ಬಿದ್ದಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!