Bengaluru

ಹಳೆ ಪಿಂಚಣಿ ಯೋಜನೆ ರದ್ದುಗೊಳಿಸಿ ಏಕ ರೂಪ ವ್ಯವಸ್ಥೆ ಜಾರಿಗೆ ತನ್ನಿ – ಹೊರಟ್ಟಿ

ಬೆಂಗಳೂರು, ಅ 1- ಕಳೆದ 2006 ರ ಏಪ್ರಿಲ್ ನಿಂದ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಜಾರಿಗೆ ತರಲಾದ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಜೆಡಿಎಸ್ ಹಿರಿಯ ಮುಖಂಡ ಹಾಗೂ ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಒಟ್ಟು ೭,೪೧,೦೪೮ ಸರಕಾರಿ ನೌಕರರಿದ್ದು ಅವರಲ್ಲಿ ೫,೧೨,೫೨೧ ಜನ ಹಳೆ ಪಿಂಚಣಿ ಯೋಜನೆಯ ವ್ಯಾಪ್ತಿಯಲ್ಲಿದ್ದಾರೆ. ೨,೨೮,೫೨೭ ನೌಕರರು ನೂತನ ಪಿಂಚಣಿ ಯೋಜನೆಯ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರಕಾರ ಕೂಡಾ ನೂತನ ಪಿಂಚಣಿ ಯೋಜನೆಯನ್ನು ಕಡ್ಡಾಯಗೊಳಿಸಿಲ್ಲ. ಅದು ಆಯಾ ರಾಜ್ಯ ಸರಕಾರಗಳಿಗೆ ಬಿಟ್ಟ ವಿಷಯ ಎಂದು ಹೇಳಿದೆ.

ಸಂವಿಧಾನದ ೧೩೧ನೇ ಪರಿಚ್ಛೇದದ ಆಶಯದಂತೆ ಹೊರಡಿಸಿರುವ ಸರಕಾರಿ ಆದೇಶದನ್ವಯ ಅಧಿಕಾರಿಗಳ ಸಮಿತಿಯಿಂದ ಮೂರು ತಿಂಗಳೊಳಗಾಗಿ ವರದಿ ಪಡೆಯಬೇಕು. ತಾವು ವಿರೋಧ ಪಕ್ಷದ ನಾಯಕರಾಗಿದ್ದಾಗ ಕೊಟ್ಟಿರುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಈಡೇರಿಸಬೇಕು. ಈ ಮೂಲಕ ೨.೨೮ ಲಕ್ಷ ನೂತನ ಪಿಂಚಣಿ ಯೋಜನಾ ವ್ಯಾಪ್ತಿಯ ನೌಕರರ ಕುಟುಂಬಗಳ ಬಾಳಿನಲ್ಲಿ ಹೊಸ ಬೆಳಕು ತರಬೇಕು ಎಂದು ಹೇಳಿದ್ದಾರೆ.

ಎಲ್ಲ ನೌಕರರಿಗೂ ಏಕರೂಪ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಲು ರಾಜ್ಯ ಸರಕಾರಿ ನೌಕರರು ಹಲವಾರು ಹೋರಾಟಗಳನ್ನು ನಡೆಸಿದ್ದು, ತಾವೂ ಕೂಡ ಬೆಳಗಾವಿಯಲ್ಲಿ ಅಧಿವೇಶನ ನಡೆದಾಗ ವಿರೋಧ ಪಕ್ಷದ ನಾಯಕರಾಗಿ ಪ್ರತಿಭಟನೆ ನಡೆಸುತ್ತಿದ್ದ ನೌಕರರನ್ನು ಭೇಟಿಯಾಗಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿರುವುದನ್ನು ನೆನಪಿಸಬಯಸುತ್ತೇನೆ ಎಂದು ಯಡಿಯೂರಪ್ಪ ಅವರಿಗೆ ಹೇಳಿದ್ದಾರೆ.

ಸಂವಿಧಾನ ಪರಿಚ್ಛೇದ ೧೩೧ ರನ್ವಯ ಪಿಂಚಣಿ ಸರಕಾರಿ ನೌಕರರ ಮೂಲಭೂತ ಹಕ್ಕು ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಅಲ್ಲದೇ ಈ ಸರಕಾರಿ ನೌಕರರ ಹೋರಾಟಕ್ಕೆ ಮಣಿದ ಸರಕಾರ ಉಲ್ಲೇಖ (೨)ರ ಸರಕಾರಿ ಆದೇಶದಂತೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ವರದಿ ನೀಡಲು ಅಧಿಕಾರಿಗಳ ಸಮಿತಿಯನ್ನು ಹಿಂದಿನ ಸರಕಾರ ರಚಿಸಿತ್ತು. ಸದರಿ ಸಮಿತಿಯು ಒಂದು ಸಭೆ ನಡೆಸಿದ್ದು ಬಿಟ್ಟರೆ ಯಾವುದೇ ಪ್ರಗತಿಯಾಗಿಲ್ಲ ಎಂಬುದನ್ನು ಅತ್ಯಂತ ನೋವಿನಿಂದ ಹೇಳುತ್ತಿದ್ದೇನೆ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!