Bengaluru

ವಿವಾದಿತ ಕೃಷಿ, ಕಾರ್ಮಿಕ ತಿದ್ದುಪಡಿ ಮಸೂದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು, ಅ.1 – ರೈತರ ಭಾರೀ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಕೈಗಾರಿಕಾ ವ್ಯಾಜ್ಯಗಳ ಕಾಯ್ದೆ (ಕಾರ್ಮಿಕ ತಿದ್ದುಪಡಿ ಕಾಯ್ದೆ) ಪರವಾಗಿ ಸುಗ್ರೀವಾಜ್ಞೆ ಹೊರಡಿಸಲು ಇಂದು ನಡೆದ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ಅಂಗೀಕರಿಸಲಾಗಿತ್ತು. ಆದರೆ ವಿಧಾನ ಪರಿಷತ್ ನಲ್ಲಿ ಇನ್ನೂ ಅಂಗೀಕಾರಗೊಂಡಿಲ್ಲ. ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ಪರಿಷತ್ ನಲ್ಲಿ ಇನ್ನೂ ಅಂಗೀಕಾರಗೊಂಡಿಲ್ಲ. ಆದರೆ ಕಾರ್ಮಿಕ ತಿದ್ದುಪಡಿ ಕಾಯ್ದೆ ಪರಿಷತ್ ನಲ್ಲಿ ಸೋಲನುಭವಿಸಿತ್ತು.
ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕೈಗೊಳ್ಳಲಾಗಿದೆ.
ಇನ್ನುಳಿದಂತೆ, ಮುಸ್ಲಿಂ ಸಮುದಾಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಆಧುನಿಕ ಶಿಕ್ಷಣ ಹಾಗೂ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಸಲುವಾಗಿ ಮೌಲಾನ ಆಜಾದ್ ಟ್ರಸ್ಟ್ ಅನ್ನು ೨೫ ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಸೇವೆಗಳು ನೇಮಕಾತಿ ತಿದ್ದುಪಡಿ ನಿಯಮಗಳು 2020ಕ್ಕೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು ನಿಯಮಗಳು 2020ಕ್ಕೆ ಸಂಪುಟ ಅನುಮೋದನೆ ನೀಡಿದೆ.
2020-21 ಸಾಲಿನಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಕಲ್ಯಾಣ ಮಂಡಳಿಯಿಂದ ನೋಂದಾಯಿತ 90 ಸಾವಿರ ಕಟ್ಟಡ ಕಾರ್ಮಿಕರಿಗೆ ಅವಶ್ಯವಾದ ಸೇಫ್ಟಿ ಕಿಟ್ ಗಳನ್ನು 42.39 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಇ-ಪ್ರೊಕ್ಯೂರ್ ಮೆಂಟ್ ಮೂಲಕ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
2020-21 ನೇ ಸಾಲಿನಲ್ಲಿ ಕಟ್ಟಡ ಮತ್ತು ಇತರ ನಿರ್ಮಾನ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ 76000 ಕಟ್ಟಡ ಕಾರ್ಮಿಕರಿಗೆ ಅವಶ್ಯವಾದ ಮೇಸನ್ ಟೂನ್ ಕಿಟ್ ಗಳನ್ನು 23.18 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಇ-ಪ್ರೊಕ್ಯೂರ್ ಮೆಂಟ್ ಮೂಲಕ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು 4,636.50 ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.
ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿತರಿಸಲು ವಿವಿಧ ವೃತ್ತಿಯ 8980 ಟೂಲ್ ಕಿಟ್ ಗಳನ್ನು 11.75 ಕೋಟಿ ರೂ.ಮೊತ್ತದಲ್ಲಿ ಖರೀದಿಸಿ ಉಚಿತವಾಗಿ ವಿತರಿಸಲು ಸಂಪುಟ ಅನುಮೋದನೆ ನೀಡಿದೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆಯಡಿ ರಾಮತೀರ್ಥ ನಗರದ ಬಡಾವಣೆಯಲ್ಲಿ ೭ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಲುವಾಗಿ ತಯಾರಿಸಲಾದ 28.98 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗಿನ ರಿಯಾಯಿತಿ ಒಪ್ಪಂದದ ಅವಧಿಯ ರಿಯಾಯಿತಿಯನ್ನು ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಊಟಿ ಚಿನ್ನದ ಗಣಿಯಲ್ಲಿ ಭೂ ಕೆಳಮೈ ಗಣಿ ಅಭಿವೃದ್ಧಿ ಕಾರ್ಯಗಳ ಪರಿಷ್ಕೃತ ಅಂದಾಜು ಮೊತ್ತ 63.08ಕೋಟಿಗಳಿಗೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು-ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಗಳ ವರ್ಗಾವಣೆ ನಿಯಂತ್ರಣ- ನಿಯಂಗಳು 2020ಕ್ಕೆ ಅನುಮೋದನೆ ನೀಡಲಾಗಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು-ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿ ವರ್ಗಾವಣೆ ನಿಯಂತ್ರಣ- ನಿಯಮಗಳು-2020ಕ್ಕೆ ಅನುಮೋದನೆ ದೊರೆತಿದೆ. ಸಮಾಜ ಕಲ್ಯಾಣ ಇಲಾಖೆಯ ಬೆಂಗಳೂರು ನಗರ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಆವರಣದಲ್ಲಿ ಡಾ.ಜಗಜೀವನ್ ರಾಂ ಸಂಶೋಧನೆ ಮತ್ತು ತರಬೇತಿ ಕೇಂದ್ರ ಕಟ್ಟಡ ನಿರ್ಮಾನ ಕಾಮಗಾರಿಯ ಮೊತ್ತ 98.93ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!