Bengaluru

ಮಾಸ್ಕ್‌ ಧರಿಸದೇ ಇದ್ದರೆ 1000 ರೂ ದಂಡ

ಬೆಂಗಳೂರು, ಸೆ.30- ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸದವರಿಗೆ ದಂಡ ಪ್ರಮಾಣವನ್ನು ನಗರ ಪ್ರದೇಶದಲ್ಲಿ 1 ಸಾವಿರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ. ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಹಿರಿಯ ಅಧಿಕಾರಿಗಳ ಶಿಪಾರಸಿನ‌ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದು, ಈ ಸಂಬಂಧ ಗುರುವಾರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಅಧಿಕಾರಿಗಳ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಪೂರ್ತಿಯಾಗಿ ಮಾಸ್ಕ್ ಧರಿಸದವರಿಗೂ ಸಹ ದಂಡ ಅನ್ವಯವಾಗಲಿದೆ. ಇತ್ತೀಚಿನ‌ ದಿನಗಳಲ್ಲಿ ಮಾಸ್ಕ್‌ ಧರಿಸದೇ ನಿರ್ಲಕ್ಷ್ಯ ತೋರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಈಗಿರುವ 200 ರೂ. ದಂಡವನ್ನು ಹೆಚ್ಚಿಸಲಾಗಿದೆ. ಆಯಾ ಪೊಲೀಸ್‌ ಠಾಣಾ ವ್ಯಾಪ್ತಿಗೆ ಗುರಿ ನಿಗದಿ ಮಾಡಿ, ದಂಡ ವಸೂಲು ಮಾಡಲಾಗುವುದು ಎಂದು ಹೇಳಿದರು.

ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಮಾವೇಶ, ಮದುವೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗರಿಷ್ಠ 50 ಜನರು ಸೇರಲು ಮಾತ್ರ ಅವಕಾಶವಿರಲಿದೆ. ಹೆಚ್ಚು ಜನ‌ ಸೇರಿದರೆ ಆಯೋಜಕರು ಅಥವಾ ಆ ಸಂಸ್ಥೆ ಮಾಲೀಕರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು.
ಮಾರುಕಟ್ಟೆ, ಮಾಲ್, ಇತರೆ ಸಾರ್ವಜನಿಕ ಸ್ಥಳದಲ್ಲಿ 5 ಕ್ಕೂ ಹೆಚ್ಚು ಜನ ಗುಂಪುಗೂಡಿ‌ ನಿಲ್ಲುವಂತಿಲ್ಲ. ಇವರ ನಡುವೆ ಸಹ ಕನಿಷ್ಠ 6 ಅಡಿ ಅಂತರವಿರಬೇಕು. ಇಲ್ಲವಾದರೆ ಆ ಸಂಸ್ಥೆ ಮಾಲೀಕರಿಗೆ ದಂಡ ಪ್ರಯೋಗ ಮಾಡಲಾಗುವುದು.

ಕೋರೋನ ಜಾಗೃತಿ ಸಂಬಂಧ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಯೋಜನೆ ರಚಿಸಲಾಗಿದೆ. ರಾಜಕಾರಣಿಗಳು, ಕ್ರೀಡೆ, ಸಿನಿ ತಾರೆಯರು, , ಧಾರ್ಮಿಕ ಗುರುಗಳ ಮೂಲಕ ಮಾಸ್ಕ್‌ ಬಗ್ಗೆ ಕೋರೋನ ನಿಯಂತ್ರಣ ಮಾಡುವ ಸಣ್ಣ ತುಣುಕುಗಳನ್ನು ವಿಡಿಯೋ ಮೂಲಕ ತಲುಪಿಸಲು ಕ್ರಮ. ಜೊತೆಗೆ ಸ್ವಯಂ ಸೇವಾ ಸಂಘಟಕರು, ಲಯನ್ಸ್‌ ಕ್ಲಬ್‌ ರೋಟರಿ‌ಕ್ಲಬ್‌, ವೆಲ್‌ಫೇರ್ ಅಸೋಸಿಯೇಷನ್ ಎಲ್ಲರೂ ಸರಕಾರದೊಂದಿಗೆ ಕೈ ಜೋಡಿಸಿದರೆ ನಿರ್ವಹಣೆಗೆ ಹೆಚ್ಚು ಪ್ರಬಲವಾಗಿ ಮಾಡಬಹುದು ಎಂದರು.

ರಾಜ್ಯದಲ್ಲಿ ಒಟ್ಟು 15 ಜಿಲ್ಲೆಗಳಲ್ಲಿ ಶೇ. 1೦ ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣ ದಾಖಲಾಗುತ್ತಿದೆ, ಈ ಪೈಕಿ ಇಂದು ಮೈಸೂರು, ಹಾಸನ, ದಕ್ಷಿಣ ಕನ್ನಡ, ತುಮಕೂರು ಶಿವಮೊಗ್ಗ ಮತ್ತು ಕೊಪ್ಪಳ ಏಳು ಜಿಲ್ಲಾಧಿಕಾರಿ, ಡಿಎಚ್‌ಒ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಪಾಸಿಟಿವ್ ಪ್ರಮಾಣವನ್ನು ಕಡಿಮೆ‌ ಮಾಡಲು ತೆಗೆದುಕೊಳ್ಳಬೇಕಾದ ಮಾರ್ಗಸೂಚಿಗಳನ್ನು ನೀಡಿದ್ದೇವೆ. ಮುಂದಿನ‌ ದಿನಗಳಲ್ಲಿ ಉಳಿದ‌ ಜಿಲ್ಲೆಗಳ ಜೊತೆ‌ ಸಭೆ ನಡೆಸಲಾಗುವುದು ಎಂದರು. ಶೇ. 17 ರಷ್ಟು ಪಾಸಿಟಿವ್ ಪ್ರಮಾಣ ಮೈಸೂರಿನಲ್ಲಿದ್ದು ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ.

ಸಾರಿಗೆ ವ್ಯವಸ್ಥೆಯಾದ ಬಸ್‌ಗಳಲ್ಲಿ ಶೇ. 50 ರಷ್ಟು ಮಾತ್ರ ಪ್ರಯಾಣಿಸಲು ಅವಕಾಶವಿದೆ., ಮಾಸ್ಕ್‌ ಇಲ್ಲದವರನ್ನು ಬಸ್‌ ಒಳಗೆ ಪ್ರವೇಶ ನೀಡದಂತೆ ಕಂಡೆಕ್ಟರ್‌ಗಳಿಗೆ ಸೂಚಿಸಲಾಗುವುದು.ಎಲ್ಲಾ ಸರ್ಕಾರಿ ಕಚೇರಿಗಳ ಕೆಲಸಗಾರರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಇಲ್ಲವಾದರೆ ಕಚೇರಿ ಪ್ರವೇಶ ವಿರುವುದಿಲ್ಲ.‌ ಇದನ್ನು ಅತ್ಯಂತ ಕಠಿಣ ಹಾಗೂ ಶಿಸ್ತಾಗಿ ಪಾಲನೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!