Lucknow

ಬಾಬರಿ ಮಸೀದಿ ಉರುಳಿಸಿದ್ದು ಸಮಾಜಘಾತುಕ ಶಕ್ತಿಗಳು- ಸಿಬಿಐ ನ್ಯಾಯಾಲಯ

ಲಖನೌ. ಸೆ 30 – ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ 28 ವರ್ಷಗಳ ವಿಚಾರಣೆ ನಂತರ ಅಂತಿಮ ತೀರ್ಪು ನೀಡಿರುವ ವಿಶೇಷ ಸಿಬಿಐ ನ್ಯಾಯಾಲಯ, ಅಯೋಧ್ಯೆಯಲ್ಲಿ 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸಗೊಳಿರುವುದರ ಹಿಂದೆ ಸಮಾಜಘಾತುಕ ಶಕ್ತಿಗಳಿದ್ದವು ಎಂದು ಹೇಳಿದೆ.

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್ ಕೆ ಯಾದವ್ ಅವರು, ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ, ಕಲ್ಯಾಣ್ ಸಿಂಗ್ ಮತ್ತು ಬಿಜೆಪಿಯ ಮೂವರು ಹಾಲಿ ಸಂಸದರನ್ನು ದೋಷಮುಕ್ತಗೊಳಿಸಿ, ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.

ಆರೋಪಿಗಳ ವಿರುದ್ಧದ ಆಪಾದನೆಗಳನ್ನು ಸಾಬೀತು ಪಡಿಸುವಲ್ಲಿ ಸಿಬಿಐಗೆ ಸಾಧ್ಯವಾಗಿಲ್ಲ ಎಂದು ಎಂದಿರುವ ನ್ಯಾಯಾಲಯ, ಬಾಬರಿ ಮಸೀದಿಯನ್ನು ಉರುಳಿಸದಂತೆ ಜನಸ್ತೋಮಕ್ಕೆ ಆರೋಪಿಗಳು ಸಮಾಧಾನಪಡಿಸಲು ಯತ್ನಿಸಿದ್ದರು ಎಂದು ನಿರ್ದಿಷ್ಟವಾಗಿ ಹೇಳಿದೆ.

ಘಟನೆ ಪೂರ್ವನಿಯೋಜಿತವಲ್ಲ. ಆರೋಪಿಗಳು ಕಟ್ಟಡ ಉರುಳಿಸುವುದರ ವಿರುದ್ಧ ಉದ್ರಿಕ್ತಗುಂಪನ್ನು ಸಮಾಧಾನ ಪಡಿಸಲು ಯತ್ನಿಸಿದ್ದರು ಎಂದಿರುವ ನ್ಯಾಯಾಲಯ, ವಿಶ್ವ ಹಿಂದೂ ಪರಿಷತ್ ನ ಮಾಜಿ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರನ್ನು ಉಲ್ಲೇಖಿಸಿ, ಮಸೀದಿ ಧ್ವಂಸಕ್ಕೆ ಮುಂದಾಗಿದ್ದ ಜನರನ್ನು ಸಮಾಧಾನ ಪಡಿಸಲು ಶಕ್ತಿಮೀರಿ ಪ್ರಯತ್ನಿಸಿದ್ದರು ಎಂದು ಹೇಳಿದೆ.

‘ಕಟ್ಟಡ ಧ್ವಂಸದ ವೇಳೆ ಸ್ಥಳದಲ್ಲಿದ್ದ ನಾಯಕರು ಉದ್ರಿಕ್ತ ಜನರನ್ನು ಸಮಾಧಾನ ಪಡಿಸಲು ಯತ್ನಿಸಿದ್ದರು. ವಿವಾದಾತ್ಮಕ ಕಟ್ಟಡ ಹಿಂದೆಯಿಂದ ಕಲ್ಲೂತೂರಾಟ ನಡೆದಿದೆ. ಧ್ವಂಸ ಘಟನೆಯಲ್ಲಿ ವಿಎಚ್ ಪಿ ಪಾತ್ರವಿಲ್ಲ.’ ಎಂದು ನ್ಯಾಯಾಧೀಶ ಸುರೇಂದ್ರಕುಮಾರ್ ಯಾದವ್ ತೀರ್ಪಿನಲ್ಲಿ ಹೇಳಿದ್ದಾರೆ.

ಒಟ್ಟು 32 ಆರೋಪಿಗಳ ಪೈಕಿ 26 ಮಂದಿ ಮಾತ್ರ ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದರು.

ಯಾವುದೇ ಪ್ರಬಲ ಸಾಕ್ಷ್ಯವಿಲ್ಲವಾದ್ದರಿಂದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲಾಗುತ್ತಿದೆ. ಬಾಬರಿ ಮಸೀದಿ ಧ್ವಂಸವನ್ನು ಸಮಾಜಘಾತುಕ ಶಕ್ತಿಗಳು ನಡೆಸಿದ್ದಾರೆಯೇ ಹೊರತು ಬೇರೆಯಾರೊಬ್ಬರೂ ಅಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!