Hathras

ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಬಲವಂತದ ಅಂತ್ಯಸಂಸ್ಕಾರ; ಕುಟುಂಬದ ಆರೋಪ

ಹತ್ರಾಸ್, ಸೆ.30- ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆಗೊಳಗಾಗಿ ನಿನ್ನೆ ನವದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟ 19 ವರ್ಷದ ದಲಿತ ಯುವತಿಯ ಮೃತದೇಹದ ಅಂತ್ಯಸಂಸ್ಕಾರವನ್ನು ಗ್ರಾಮಸ್ಥರು ಮತ್ತು ಕುಟುಂಬಸ್ಥರ ಭಾರೀ ಪ್ರತಿಭಟನೆಯ ನಡುವೆಯೇ ಬುಧವಾರ ಬೆಳಗ್ಗಿನ ಜಾವ ಪೊಲೀಸ್ ಭದ್ರತೆಯೊಂದಿಗೆ ನೆರವೇರಿಸಲಾಗಿದೆ.

ಮಗಳ ಮೃತದೇಹವನ್ನು ಕೊನೆಯ ಬಾರಿಗೆ ಮನೆಗೆ ತೆಗೆದುಕೊಂಡು ಹೋಗಬೇಕು ಎಂಬ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಬೇಡಿಕೆಯನ್ನು ಮನ್ನಿಸದ ಪೊಲೀಸರು ತರಾತುರಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಉತ್ತರ ಪ್ರದೇಶದ ಹತ್ರಾಸ್ ಮೂಲದ ದಲಿತ ಯುವತಿ ತಾಯಿಯೊಂದಿಗೆ ಗದ್ದೆಗೆ ಹೋಗಿದ್ದಾಗ ನಾಲ್ವರು ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ತೀವ್ರವಾಗಿ ಹಲ್ಲೆ ನಡೆಸಿದ್ದರು. ಪ್ರಜ್ಞೆ ತಪ್ಪಿದ್ದ ಆಕೆಯನ್ನು ಮೊದಲು ಎರಡು ವಾರಗಳ ಕಾಲ ಅಲಿಘಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಆಕೆಯ ಪರಿಸ್ಥಿತಿ ವಿಷಮಗೊಂಡಿದ್ದರಿಂದ ಎರಡು ದಿನಗಳ ಹಿಂದೆ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಬೆಳಗ್ಗೆ ಅಲ್ಲಿ ಮೃತಪಟ್ಟಿದ್ದಳು.

ಮಗಳ ಪ್ರಾರ್ಥೀವ ಶರೀರದ ಅಂತ್ಯಸಂಸ್ಕಾರವನ್ನು ಪೊಲೀಸರು ಬಲವಂತವಾಗಿ ನೆರವೇರಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇಂದು ಬೆಳಗ್ಗಿನ ಜಾವ 1 ಗಂಟೆ ಸುಮಾರಿಗೆ ಚಾಂದಪಾ ಪೊಲೀಸ್ ಠಾಣಾ ವ್ಯಾಪ್ತಿಯ ಬುಲ್ ಗರಿ ಗ್ರಾಮಕ್ಕೆ ಆಂಬುಲೆನ್ಸ್ ನಲ್ಲಿ ಮೃತದೇಹವನ್ನು ತರಲಾಯಿತು. ಪೊಲೀಸರು ನೇರವಾಗಿ ಅಲ್ಲಿಂದ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರು ಅದಕ್ಕೆ ಅಡ್ಡಿಪಡಿಸಿದರು. ನಂತರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಸಣ್ಣಮಟ್ಟದ ಘರ್ಷಣೆ ಕೂಡ ನಡೆದಿತ್ತು.

ರಾಜಕೀಯ ಪಕ್ಷಗಳ ಭಾರೀ ಪ್ರತಿಭಟನೆಯ ನಂತರ ಶವವನ್ನು ರಾತ್ರಿ 9.30ರ ಸುಮಾರಿಗೆ ನವದೆಹಲಿಯ ಸಫ್ದರ್‌ಗಂಜ್ ಆಸ್ಪತ್ರೆಯಿಂದ ಹೊರತರಲಾಯಿತು. ಮಾರ್ಗಮಧ್ಯೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಯಮುನಾ ಎಕ್ಸ್‌ಪ್ರೆಸ್ ವೇ ಮೂಲಕ ಹತ್ರಾಸ್‌ಗೆ ತರಲಾಯಿತು.

ವಿಭಾಗೀಯ ಆಯುಕ್ತ ಜೆ ಎಸ್ ಪ್ರಿಯದರ್ಶಿ, ಐಜಿ ಪಿತುಶ್ ಮೊರ್ದಿಯಾ, ಡಿಎಂ ಪ್ರವೀಣ್ ಕುಮಾರ್ ಲಾಶರ್ ಮತ್ತು ಎಸ್ಪಿ ವಿಕ್ರಂತ್ ವೀರ್ ಸೇರಿದಂತೆ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

ಆದಾಗ್ಯೂ, ಹೆಚ್ಚಿನ ಗೊಂದಲಗಳ ನಂತರ, ಮೃತ ದೇಹವನ್ನು ಬೆಳಗ್ಗಿನ ಜಾವ 3.50ರ ಸುಮಾರಿಗೆ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.

ಯುವತಿಯ ಮೇಲೆ ಅದೇ ಗ್ರಾಮದ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿ ತೀವ್ರ ಹಲ್ಲೆ ನಡೆಸಿದ್ದರು. ಈ ಘಟನೆ ಸೆಪ್ಟೆಂಬರ್ 14 ರಂದು ಪೊಲೀಸರಿಗೆ ವರದಿಯಾಗಿದ್ದು, ಯುವತಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಜಿಲ್ಲಾಧಿಕಾರಿಗಳು ಸಂತ್ರಸ್ತ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!