Bengaluru

ಕೊರೊನಾ ಸೂಚನೆ ನಿರ್ಲಕ್ಷಿಸಿದರೆ ನಿರ್ದಾಕ್ಷಿಣ್ಯ ಕ್ರಮ

ಬೆಂಗಳೂರು, ಸೆ.29- ಕೊರೊನಾ ನಿಯಂತ್ರಣ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಮಾಸ್ಕ್‌ ಧರಿಸದ, ಭೌತಿಕ ಅಂತರ ಕಾಯ್ದುಕೊಳ್ಳದ, ಸಭೆ – ಸಮಾರಂಭ ನೆಪದಲ್ಲಿ ಜನದಟ್ಟಣೆಗೆ ಅವಕಾಶ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಒಂದೆರಡು ದಿನದಲ್ಲಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮಂಗಳವಾರ ತಜ್ಞರು ಮತ್ತು ಅಧಿಕಾರಿಗಳ ಸಭೆ ಬಳಿಕ ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲಾಕ್ ಡೌನ್ ತೆರವು ಬಳಿಕ ಕಳೆದೆರಡು ತಿಂಗಳಿಂದ ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈಗಿರುವ ಏಕೈಕ ಮಾರ್ಗವೆಂದರೆ ಕಠಿಣ ಕಾನೂನು ಜಾರಿಗೆ ತರುವುದು.

ಸರಕಾರದ ಮಾರ್ಗಸೂಚಿ ಅನುಸರಿಸದವರ ವಿರುದ್ದ ಕಠಿಣ ಶಿಕ್ಷೆ ಹಾಗೂ ದಂಡ ಪ್ರಯೋಗ ಅನಿವಾರ್ಯ ಎಂದರು.

ಇತ್ತೀಚೆಗೆ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಸಭೆ ಸಮಾರಂಭಗಳು ಹೆಚ್ಚಾಗಿದ್ದು, ಜನರು ಗುಂಪುಗೂಡಿ ಭಾಗವಹಿಸುತ್ತಿದ್ದಾರೆ. ಇದರಿಂದ ಸೋಂಕು ವೇಗವಾಗಿ ಹರಡುತ್ತಿರುವುದು ಗಮನಕ್ಕೆ ಬಂದಿದೆ. ಇಂಥ ಸಮಾರಂಭಗಳಿಗೆ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ. ಸೋಂಕು ಹೆಚ್ಚಿರುವ ಜಿಲ್ಲಾಡಳಿತಗಳ ಜೊತೆ ಸಮಾಲೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ತಜ್ಞರು ಮತ್ತು ಅಧಿಕಾರಿಗಳು ಕೆಲ ಸಲಹೆಗಳನ್ನು ನೀಡಿದ್ದಾರೆ ಎಂದು ವಿವರಿಸಿದರು.

ಕೊರೋನಾ ಜತೆಗಿನ ಯುದ್ಧ ಮುಗಿದಿಲ್ಲ. ಸರ್ಕಾರದ ಜತೆ ಸಾರ್ವಜನಿಕರು ಕೈಜೋಡಿಸಿದರೆ ಮಾತ್ರ ಗೆಲುವು ಸಾಧ್ಯ. ಸಮಾಜದ ಎಲ್ಲಾ ಕ್ಷೇತ್ರದ ಗಣ್ಯರು, ವಿಶೇಷವಾಗಿ ಯುವಕರು, ಸಂಘ – ಸಂಸ್ಥೆಗಳು ಹೋರಾಟದಲ್ಲಿ ಕೈ ಜೋಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸರ್ಕಾರ ನೀಡುತ್ತಿರುವ ಉಚಿತ ಚಿಕಿತ್ಸೆ ಮತ್ತು ಕೈಗೊಂಡಿರುವ ಕ್ರಮಗಳ ಬಗ್ಗೆ ಗುಣಮುಖರಾದವರು ನೆರೆಹೊರೆಯವರ ಜತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಆತಂಕ ನಿವಾರಿಸಬೇಕು ಎಂದು ಮನವಿ ಮಾಡಿದರು.

ಅಂತ್ಯ ಸಂಸ್ಕಾರದಲ್ಲಿ ಮೃತರ ಕುಟುಂಬದ ಸದಸ್ಯರು ಪಿಪಿಇ ಧರಿಸಿ ಪಾಲ್ಗೊಳ್ಳಲು ಅನುಮತಿ ನೀಡುವ ಬಗ್ಗೆ ಸಿಎಂ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸೆಲೆಬ್ರಿಟಿಗಳು ಜಾಗೃತಿ ಮೂಡಿಸಲಿ; ಕೊರೋನ ಸೋಂಕಿನ‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಸರಕಾರದೊಂದಿಗೆ ಸಿನಿಮಾ‌ ತಾರೆಯರು, ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು, ಕಲಾವಿದರು, ವಿಶೇಷ ವ್ಯಕ್ತಿಗಳ ಜೊತೆಗೂಡಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಿದ್ದೇವೆ. ಜೊತೆಗೆ ಜನರು ಸಹ ಸ್ವಯಂ ಪ್ರೇರಿತರಾಗಿ ಜಾಗೃತರಾಗಬೇಕು ಎಂದು ಕರೆ‌ನೀಡಿದರು.

ರಾಜ್ಯದ 11 ಜಿಲ್ಲೆಗಳ ಪೈಕಿ 7 ಜಿಲ್ಲೆಗಳಲ್ಲಿ ಶೇ.12 ರಷ್ಟು ಪಾಸಿಟಿವ್‌ ರೇಟ್‌ ದಾಖಲಾಗಿದೆ. ಆದರೆ ಸಾವಿನ ಪ್ರಮಾಣದಲ್ಲಿ ರಾಜ್ಯ ಶೇ. 1.5 ರಷ್ಟಿದ್ದು ನಿಯಂತ್ರಣದಲ್ಲಿದ್ದೇವೆ. ಈ ಪ್ರಮಾಣವನ್ನು ಶೇ. 1 ಕ್ಕಿಂತ ಕೆಳಗಿಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಮಾಧ್ಯಮಗಳಿಗೆ ಕಾರ್ಯಾಗಾರ: ಕೊರೋನ ಸೋಂಕಿನ ಬಗ್ಗೆ ಜಾಗೃತಿ‌ ಮೂಡಿಸುವಲ್ಲಿ ಮಾಧ್ಯಮದ ಪಾತ್ರ ದೊಡ್ಡದು. ಹೀಗಾಗಿ ಮಾಧ್ಯಮದವರಿಗಾಗಿ ವಿಶೇಷ ಕಾರ್ಯಾಗಾರ ನಡೆಸುವ ಸಲಹೆ ಕೇಳಿ ಬಂದಿದ್ದು, ಈ ವಾರದೊಳಗೆ ಕಾರ್ಯಾಗಾರ ಆಯೋಜನೆ ಮಾಡಲಾಗುವುದು ಎಂದರು.

ಲಸಿಕೆಯೇ ಮಾಸ್ಕ್: ಕೊರೋನ ಸೋಂಕಿಗೆ ಮಾಸ್ಕ್‌ ಧರಿಸುವುದೇ ಲಸಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅದರಂತೆ ನಾವೆಲ್ಲರೂ ಮಾಸ್ಕ್‌ ಧರಿಸುವ ಮೂಲಕ ಕೊರೋನ ನಿಯಂತ್ರಿಸೋಣ. ನಾವಿನ್ನೂ ಕೊರೋನ ಯುದ್ಧದ ಮಧ್ಯೆ ಭಾಗದಲ್ಲಿದ್ದೇವೆ, ನಮ್ಮ ಬಳಿ ಇರುವ ಶಸ್ತ್ರಾಸ್ತ್ರವೇ ಮಾಸ್ಕ್‌ ಇದನ್ನು ಕೆಳಗಿಡುವುದು ಬೇಡ, ಜನರು ಹೆಚ್ಚಾಗಿ ಜಾಗೃತರಾಗಬೇಕು, ಇದರ ಹೊರತು ಕೊರೋನ‌ ನಿಯಂತ್ರಣ ಅಸಾಧ್ಯ ಎಂದು ಸಾರ್ವಜನಿಕರಲ್ಲಿ ಸಚಿವರು ಮನವಿ ಮಾಡಿದರು.

ಇತ್ತೀಚೆಗೆ ಪ್ರಧಾನಿ‌ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಟೆಸ್ಟಿಂಗ್‌ ಪ್ರಮಾಣವನ್ನು ಮೂರುಪಟ್ಟು ಹೆಚ್ಚಿಸಲು ಸೂಚನೆ ನೀಡಿದ್ದಾರೆ, ಅಂತೆಯೇ ಎಲ್ಲಾ ಅಧಿಕಾರಿಗಳಿಗೂ ನಿರ್ದೇಶನ ನೀಡಿದ್ದು, ಹಂತಹಂತವಾಗಿ ಹೆಚ್ಚಿಸಲಿದ್ದೇವೆ ಎಂದು ಸುಧಾಕರ್ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!