Editorial

ಅರಣ್ಯ ರೋದನ

ಅಧಿಕಾರಸ್ಥರಿಗೆ ತಾವು ಮಾಡಿದ್ದೇ ಸರಿ ಎನಿಸಿದರೆ ಅವರು ಯಾರ ಸಲಹೆಯನ್ನೂ ಕೇಳುವುದಿಲ್ಲ, ಯಾರ ಮಾತಿಗೂ ಬೆಲೆ ಕೊಡುವುದಿಲ್ಲ. ಅದನ್ನು ನಾವೀಗ ಎಲ್ಲ ಕಡೆ ಕಾಣುತ್ತಿದ್ದೇವೆ. ಕಳೆದ ಆರು ವರ್ಷಗಳಲ್ಲಿ ಎಷ್ಟೊಂದು ಪ್ರಬಲ ಚಳವಳಿಗಳು ನಡೆದವು. ಯಾವುದಕ್ಕೂ ಸರ್ಕಾರ ಜಗ್ಗಲಿಲ್ಲ, ಕುಗ್ಗಲಿಲ್ಲ. ಬದಲಿಗೆ ವಿರೋಧದಲ್ಲಿ ನಿರತ ವ್ಯಕ್ತಿ, ಸಂಸ್ಥೆ ಮತ್ತು ಸಮುದಾಯಗಳನ್ನು ಬಗ್ಗು ಬಡಿಯುವ ಕೆಲಸ ಮಾಡಿತು. ಈ ಹಿನ್ನೆಲೆಯಲ್ಲಿ ನೋಡಿದಾಗ ಈಗ ನಡೆಯುತ್ತಿರುವ ರೈತರ, ಕಾರ್ಮಿಕರ ಚಳವಳಿ ಕೂಡ ಅದೇ ಗತಿ ಕಾಣುತ್ತದೆ ಎನಿಸುತ್ತದೆ.

ನೋಟು ಅಮಾನ್ಯೀಕರಣವನ್ನೇ ನೋಡಿ. ಯಾರ ಸಲಹೆಯನ್ನೂ ಪಡೆಯದೇ ರಿಜರ್ವ ಬ್ಯಾಂಕ್ ವಿರೋಧಿಸಿದರೂ ಜಾರಿಗೆ ತರಲಾಯಿತು. ತನ್ನ ಹಣ ತಾನು ಪಡೆಯಲು ಸಾಲಲ್ಲಿ ನಿಂತು ಚಡಪಡಿಸುತ್ತ ನಿಂತಿದ್ದ ಅಮಾಯಕರನ್ನು ತೋರಿಸಿ, ಹೇಗೆ ಒದ್ದಾಡುತ್ತಿದ್ದಾರೆ ನೋಡಿ ಕಪ್ಪು ಹಣದವರು ಎಂದು ಗೇಲಿ ಮಾಡಲಾಯಿತು. ಬಂಧುಗಳನ್ನು ಆಸ್ಪತ್ರೆಗೆ ಸೇರಿಸಿದವರು ಮತ್ತು ಮಕ್ಕಳ ಮದುವೆ ಏರ್ಪಡಿಸಿ ಹಣ ಇಲ್ಲದೇ ಹೇಗೆ ಚಡಪಡಿಸುತ್ತಿದ್ದಾರೆ ನೋಡಿ ಎಂದು ಗೇಲಿ ಮಾಡಿ ಚಪ್ಪಾಳೆ ಗಿಟ್ಟಿಸಿದ ಮಹಾನುಭಾವ ನಾಯಕರಿವರು.

ಸಣ್ಣದೊಂದು ತಮಿಳುನಾಡು ರೈತರ ಪ್ರತಿಭಟನೆ ತಿಂಗಳಾನುಗಟ್ಟಲೇ ದೆಹಲಿಯಲ್ಲಿ ನಡೆಯಿತು. ಸರ್ಕಾರದ ಪರ ಯಾರೊಬ್ಬರೂ ಬಂದು ನಿಮ್ಮ ತೊಂದರೆ ಏನು ಎಂದು ವಿಚಾರಿಸುವ ಗೋಜಿಗೆ ಕೂಡ ಹೋಗಲಿಲ್ಲ. ಆಸ್ಸಾಂನಲ್ಲಿ ಎನ್‍ಆರ್‍ಸಿ ಜಾರಿ ಮಾಡಲಾಯಿತು. ಅದಕ್ಕಾಗಿ ನೂರಾರು ಕೋಟಿ ಖರ್ಚು ಮಾಡಿತು. ಪರಿಣಾಮವಾಗಿ ಈ ದೇಶದ ಲಕ್ಷಾಂತರ ನಿಜವಾದ ನಾಗರಿಕರೇ ನಾಗರಿಕತ್ವ ಕಳೆದುಕೊಂಡು ಸಂಕಷ್ಟಕ್ಕೆ ಗುರಿಯಾದರು. ಆದರೂ ಇಡೀ ದೇಶದಲ್ಲಿ ಎನ್‍ಆರ್‍ಸಿ ಜಾರಿ ಮಾಡುವ ಮಾತು ಕೇಳಿ ಬಂತು. ಅದರ ಮುಂದಿನ ಹಂತವಾಗಿ ನಾಗರಿಕತ್ವ ತಿದ್ದುಪಡಿ ವಿಧೇಯಕ ತಂದಿತು. ಅದನ್ನು ವಿರೋಧಿಸಿ ದೆಹಲಿಯ ಶಾಹೀನಬಾಗ್‍ನಲ್ಲಿ ಕುಳಿತ ನೂರಾರು ಸಾಮಾನ್ಯ ಮಹಿಳೆಯರನ್ನು ಭಯೋತ್ಪಾದಕರು ಎಂಬಂತೆ ಬಿಂಬಿಸಲಾಯಿತು. ಅಲ್ಲಿಗೆ ಭೇಟಿ ನೀಡಿದ ಗಣ್ಯರ ವಿರುದ್ಧ ಯುಎಪಿಎ ಅಡಿ ಕೇಸು ದಾಖಲು ಮಾಡಿ ಜೈಲಿಗೆ ಅಟ್ಟಲಾಯಿತು. ಗರ್ಭಿಣಿ ಹೆಣ್ಣು ಮಗಳಿಗೂ ವಿನಾಯತಿ ನೀಡಲಿಲ್ಲ. ಆಕೆ ಹಲವು ತಿಂಗಳ ಜೈಲು ವಾಸದಿಂದ ನ್ಯಾಯಾಲಯದ ಕೃಪೆಯಿಂದ ಬಿಡುಗಡೆ ಕಾಣಬೇಕಾಯಿತು. ಎನ್‍ಆರ್‍ಸಿ ವಿರೋಧಿಸಿದ ಉತ್ತರ ಪ್ರದೇಶದ ವೈದ್ಯನನ್ನು ನೂರಕ್ಕೂ ಹೆಚ್ಚು ದಿನ ಜೈಲಲ್ಲಿ ಕೊಳೆಸಲಾಯಿತು.

ಈ ಎಲ್ಲ ಪ್ರಕರಣಗಳನ್ನು ನೋಡಿದರೆ, ರೈತರ ಚಳವಳಿ ಯಾವ ಸ್ವರೂಪ ತಳೆಯುತ್ತದೆಯೋ ಎಂಬ ಅನುಮಾನ ಆಗುವುದು ಸಹಜ. ಆದರೆ ಎಷ್ಟೇ ವ್ಯಾಪಕ ಚಳವಳಿ ಇರಲಿ ಅದನ್ನು ಮುಲಾಜಿಲ್ಲದೇ ಹತ್ತಿಕ್ಕುವ ಎಲ್ಲ ಅಸ್ತ್ರಗಳನ್ನು ಸರ್ಕಾರ ಹೊಂದಿದೆ. ಹರಿಯಾನಾದಲ್ಲಿ ಬೀದಿಗಿಳಿದ ರೈತರನ್ನು ಕೋವಿಡ್ ಸಮಯದ ಆದೇಶ ಉಲ್ಲಂಘಿಸಿ ಗುಂಪು ಸೇರಿದರು ಎಂದು ಬಂಧಿಸಿರುವುದನ್ನು ಗಮನಿಸಬಹುದು. ಎಲ್ಲ ಅಸ್ತ್ರಗಳನ್ನು ತನ್ನ ಪರ ಹೇಗೆ ಬಳಸಿಕೊಳ್ಳಬೇಕು ಎಂಬುದು ಚೆನ್ನಾಗಿ ತಿಳಿದಿರುವ ಮತ್ತು ಅದನ್ನು ಯಾವುದೇ ಮುಲಾಜಿಲ್ಲದೇ ಪ್ರಯೋಗಿಸುವ ಕೆಲಸ ಈಗ ಜಾರಿಯಲ್ಲಿ ಇದೆ. ಈ ನಡುವೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಕೇಂದ್ರದ ಮಸೂದೆ ಅಸಿಂಧು ಆಗಿಸಬೇಕು ಎಂಬ ಸೂಚನೆ ಪಕ್ಷದಿಂದ ಬಂದಿದೆ. ಇದರಿಂದ ನಮ್ಮ ಗಣತಂತ್ರ ವ್ಯವಸ್ಥೆ ಯಾವ ಹಂತ ಮುಟ್ಟಿದೆ ಎಂದು ಯಾರಾದರೂ ಅಂದಾಜಿಸಬಹುದು.

ನಮ್ಮ ರಾಜ್ಯ ಸರ್ಕಾರ ಕೂಡ ಅಂಥದ್ದೇ ನಿರ್ದಯ ಕ್ರಮಕ್ಕೆ ಮುಂದಾಗಿರುವುದು ನಿಜಕ್ಕೂ ಗಾಬರಿ ಹುಟ್ಟಿಸುವಂಥದ್ದು. ಎಲ್ಲರಿಗೂ ಗೊತ್ತಿರುವ ಹಾಗೆ ಖಾಸಗಿ ವಾಹಿನಿಯೊಂದು ಮುಖ್ಯಮಂತ್ರಿ ಪುತ್ರ ನೂರಾರು ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸಾಕ್ಷಿ ಸಮೇತ ಬಿಂಬಿಸಿತು. ಅದೇ ವಿಚಾರ ಇತ್ತೀಚೆಗೆ ನಡೆದ ವಿಧಾನಸಭೆ ಕಲಾಪದಲ್ಲಿಯೂ ವ್ಯಕ್ತ ಆಯಿತು. ಸದನ ಮುಗಿಯುತ್ತಿದ್ದಂತೆ ರಾಜ್ಯ ಸರ್ಕಾರವು ವಾಹಿನಿ ಮೇಲೆ ನ್ಯಾಯಯುತ ಕ್ರಮ ಜರುಗಿಸಬಹುದಿತ್ತು ಅಥವಾ ಅಲ್ಲಿ ಬಿತ್ತರವಾದ ಸಂಗತಿಗಳು ಸತ್ಯಕ್ಕೆ ದೂರ ಎಂದು ಸಾಬೀತು ಮಾಡುವ ಯತ್ನ ಮಾಡಬಹುದಿತ್ತು. ಅದಕ್ಕೆ ಬದಲಾಗಿ ಆ ವಾಹಿನಿ ಮೇಲೆ ಪೋಲೀಸರಿಂದ ದಾಳಿ ನಡೆಸಲಾಗಿದೆ. ಅಲ್ಲದೇ ಉಳಿದ ವಾಹಿನಿಗಳು ಮುಖ್ಯಮಂತ್ರಿ ಪುತ್ರನ ಕುರಿತು ಯಾವುದೇ ಸುದ್ದಿ ಪ್ರಸಾರ ಮಾಡಬಾರದು ಎಂದು ನ್ಯಾಯಾಲಯದಿಂದ ಆದೇಶ ತಂದಿದೆ.

ನಮಗೆ ಗೊತ್ತಿರುವ ಹಾಗೆ ಕರ್ನಾಟಕದ ಇತಿಹಾಸದಲ್ಲಿ ಹೀಗೆ ಮಾಧ್ಯಮದ ಮೇಲೆ ಪ್ರಹಾರ ಮಾಡಿರುವ ಕೆಲಸ ಎಂದೂ ನಡೆದಿರಲಿಲ್ಲ. ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ವಾಹಿನಿಯ 250 ಸಿಬ್ಬಂದಿ ಮತ್ತು ಅವರ ಕುಟುಂಬಗಳು ಬೀದಿ ಪಾಲಾಗಿವೆ. ಇನ್ನು ಅದ್ಯಾವ ತಂತ್ರ ಅನುಸರಿಸಿ ತಮ್ಮನ್ನು ರಕ್ಷಿಸಿಕೊಳ್ಳಲು ಅಧಿಕಾರದಲ್ಲಿ ಇರುವ ಜನ ಯತ್ನಿಸುತ್ತಾರೋ ತಿಳಿಯದು.

ಈಗ ತರಲಾಗಿರುವ ಮಸೂದೆ ರೈತರ ಅನುಕೂಲಕ್ಕೆ ಎಂದು ಸರ್ಕಾರ ಹೇಳುತ್ತಿದೆ. ನೋಟು ಅಮಾನ್ಯೀಕರಣ ತರುವಾಗ ಕೂಡ ಇದು ಜನರ ಹಿತಕ್ಕೆ ಎಂದು ಹೇಳಲಾಗಿತ್ತು. ಜಿಎಸ್‍ಟಿ ಜಾರಿಗೆ ತರುವಾಗ ಇದು ಉದ್ಯಮಗಳ ಹಿತಕ್ಕೆ ಎಂದು ಹೇಳಲಾಗಿತ್ತು. ಆದರೆ ನಿಜ ಏನು ಎಂದು ಈಗ ಎಲ್ಲರಿಗೂ ಅರ್ಥ ಆಗಿದೆ.

ಈಗ ದೇಶಾದ್ಯಂತ ಸರ್ಕಾರದ ವಿರುದ್ಧ ರೈತರು ಹೋರಾಟ ಮಾಡುತ್ತಿರುವುದು ಕಾಂಗ್ರೆಸ್ ತಪ್ಪು ಕಲ್ಪನೆ ಮೂಡಿಸುತ್ತ ಇರುವುದರಿಂದ ಎಂದು ರಾಗ ಎಳೆಯುವಷ್ಟಕ್ಕೆ ಕೇಂದ್ರ ಸೀಮಿತ ಆಗಿದೆ. ಹಿರಿಯ ಪತ್ರಕರ್ತ ಪಿ.ಸಾಯಿನಾಥ ಒಂದು ಸಲಹೆ ನೀಡಿದ್ದಾರೆ. ಎಂಎಸ್‍ಪಿ ಕುರಿತು ಗೊಂದಲ ಇದೆ ಅಲ್ಲವೇ? ಅದನ್ನು ನಿವಾರಿಸಲು ಸಂಸತ್ತಿನಲ್ಲಿ ಒಂದು ಮಸೂದೆ ಮಂಡಿಸಿ, ಕನಿಷ್ಠ ಬೆಂಬಲ ಬೆಲೆಗೆ ಸರ್ಕಾರ ಬದ್ಧ ಎಂದೂ, 2022ರ ಹೊತ್ತಿಗೆ ರೈತರ ಉತ್ಪನ್ನಕ್ಕೆ ಸ್ವಾಮಿನಾಥನ ಆಯೋಗದ ವರದಿಯಂತೆ ಬೆಲೆ ದೊರಕಲಿದೆ ಎಂದು ಕಾನೂನು ಜಾರಿಗೊಳಿಸಿ ಎಂದಿದ್ದಾರೆ. ಇದೆಲ್ಲ ಆಗದ ಕೆಲಸ. ಅದಕ್ಕೇ ಹೇಳಿದ್ದು, ಜನರ ಎಲ್ಲ ನೋವುಗಳು ಅರಣ್ಯ ರೋದನ ಆಗಿವೆ.

Leave a Reply

Your email address will not be published. Required fields are marked *

Back to top button
error: Content is protected !!