Vijayawada

ಎಸ್‌ಪಿಬಿಗೆ ಭಾರತರತ್ನ ನೀಡುವಂತೆ ಪ್ರಧಾನಿಗೆ ಜಗನ್‍ಮೋಹನ್ ರೆಡ್ಡಿ ಮನವಿ

ವಿಜಯವಾಡ, ಸೆ 28 –ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕ ದಿವಂಗತ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪುರಸ್ಕಾರ ನೀಡಿ ಗೌರವಿಸುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ, ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

ಈ ಕುರಿತಂತೆ ಪ್ರಧಾನಿಗೆ ಬರೆದಿರುವ ಮನವಿ ಪತ್ರದಲ್ಲಿ ಜಗನ್,’ ಗಾನಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಜನ್ಮಸ್ಥಳ ನೆಲ್ಲೂರು ಆಗಿರುವುದು ಆಂಧ್ರಪ್ರದೇಶದ ಅದೃಷ್ಟ.ಅವರು ತಮ್ಮ ಮಾತೃಭಾಷೆಯಾದ ತೆಲುಗು ಸೇರಿದಂತೆ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 40,000 ಹಾಡುಗಳನ್ನು ಹಾಡಿದ್ದಾರೆ. ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ಆರು ರಾಷ್ಟ್ರೀಯ ಪ್ರಶಸ್ತಿಗಳು, 25 ಆಂಧ್ರಪ್ರದೇಶ ಸರ್ಕಾರದ ನಂದಿ ಪ್ರಶಸ್ತಿಗಳು, ಆರು ಫಿಲ್ಮ್ ಫೇರ್ ಪ್ರಶಸ್ತಿಗಳು ಸೇರಿ ನೂರಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಅಲ್ಲದೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಾದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.” ಎಂದು ಹೇಳಿದ್ದಾರೆ.

ಲತಾ ಮಂಗೇಶ್ಕರ್, ಭೂಪೆನ್ ಹಜಾರಿಕಾ, ಎಂ ಎಸ್ ಸುಬ್ಬುಲಕ್ಷ್ಮಿ, ಬಿಸ್ಮಿಲ್ಲಾ ಖಾನ್, ಭೀಮಸೇನ್ ಜೋಶಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ ಎಂದು ಜಗನ್ ಉಲ್ಲೇಖಿಸಿದ್ದಾರೆ.

‘ಎಸ್‍ಪಿಬಿ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲು ತಮ್ಮಲ್ಲಿ ವಿನಂತಿಸುತ್ತಿದ್ದೇನೆ. ಐದು ದಶಕಗಳ ಅವರ ಗಮನಾರ್ಹ ಕಾರ್ಯಕ್ಕೆ ಇದು ಅತ್ಯುನ್ನತ ಮನ್ನಣೆಯಾಗಲಿದೆ. ನಮ್ಮ ನೆನಪಿನಲ್ಲಿ ಇದು ಶಾಶ್ವತವಾಗಿ ಉಳಿಯುತ್ತದೆ.’ ಎಂದು ಜಗನ್‍ ಪತ್ರದಲ್ಲಿ ಪ್ರಧಾನಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!