Bengaluru

ತೇಜಸ್ವಿ ಸೂರ್ಯಗೆ ಸಂಸದನೆಂಬ ಪರಿಜ್ಞಾನ ಇಲ್ಲ -ಸಲೀಂ ಅಹ್ಮದ್

ಬೆಂಗಳೂರು, ಸೆ.28 – ಬೆಂಗಳೂರು ಉಗ್ರರ ತಾಣವಾಗುತ್ತಿದೆ ಎಂಬ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ನೀಡುವ ಹೇಳಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಲೀಂ ಅಹ್ಮದ್, ಸಂಸದನೆಂಬ ಪರಿಜ್ಞಾನ ಇಲ್ಲದೆ ಬೆಂಗಳೂರು ನಗರದ ಕುರಿತು ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದು ಖ್ಯಾತಿ ಪಡೆದಿರುವ ನಗರವನ್ನು ಭಯೋತ್ಪಾದಕರ ತಾಣ ಎಂದಿರುವುದು ನಾಚಿಕೆಗೇಡು. ರಾಜ್ಯಕ್ಕೆ ಅಪಮಾನ ಮಾಡಿರುವ ತೇಜಸ್ವಿ ಸೂರ್ಯ ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಟ್ವೀಟ್ ಮಾಡಿದ್ದಾರೆ.

“ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ” ಎಂದು ಸದಾ ಜಪಿಸುತ್ತಾ ಭಯ ಸೃಷ್ಟಿಸುತ್ತಿದ್ದ ಬಿಜೆಪಿಯವರ ಈ ಹೇಳಿಕೆ ನಾಚಿಕೆಗೇಡಿನದ್ದು, ಭಯೋತ್ಪಾದನೆ ನಿಗ್ರಹದಲ್ಲಿ ಕಳೆದ 6 ವರ್ಷದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆಯೇ?. ಯಡಿಯೂರಪ್ಪ ಸರ್ಕಾರದ ಕಾನೂನು ಸುವ್ಯವಸ್ಥೆ ವಿಫಲವಾಗಿದೆಯೇ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಯಡಿಯೂರಪ್ಪನವರೇ ನಿಮ್ಮ ಅಪಕ್ವ ಆಡಳಿತದಲ್ಲಿ ಕರ್ನಾಟಕದ ಉದ್ಯಮ ಸ್ನೇಹಿ ಶ್ರೇಯಾಂಕ ಗಣನೀಯ ಕುಸಿತ ಕಂಡಿದೆ. ಈಗ ತೇಜಸ್ವಿ ಸೂರ್ಯ ಹೇಳಿಕೆಯಿಂದ ಬಂಡವಾಳ ಹೂಡಿಕೆಯಲ್ಲಿ ಇನ್ನಷ್ಟು ಹಿನ್ನೆಡೆಯಾಗಲಿದೆ, ಬುದ್ಧಿವಾದ ಹೇಳುತ್ತೀರೋ? ಅಥವಾ ನಿಮ್ಮ ಆಡಳಿತದ ಕಾನೂನು ಸುವ್ಯವಸ್ಥೆಯ ವೈಫಲ್ಯವೆಂದು ಒಪ್ಪಿಕೊಂಡು ಸುಮ್ಮನಾಗುತ್ತಿರೋ? ಎಂದು ಕಾಂಗ್ರೆಸ್ ಟ್ವಿಟ್ ಮೂಲಕ ಕುಟುಕಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!