Sports

ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್‌ ಆಡದೆ ಇರುವುದಕ್ಕೆ ಶೇನ್‌ ವಾರ್ನ್‌ ಅಚ್ಚರಿ

ನವದೆಹಲಿ, ಸೆ 28- ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ರಾಜಸ್ಥಾನ್‌ ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಇವರು ರನ್‌ಗಳನ್ನು ಮಾತ್ರ ಗಳಿಸುತ್ತಿಲ್ಲ. ಆದರೆ, ವಿಶ್ವ ಕ್ರಿಕೆಟ್‌ ಅಚ್ಚರಿ ಮೂಡುವಂತೆ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್‌ ರಾಯಲ್ಸ್ ತಂಡದ ಮೊದಲನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಕೇವಲ 32 ಎಸೆತಗಳಲ್ಲಿ 74 ರನ್‌ಗಳನ್ನು ಚಚ್ಚಿದ್ದರು. ಇವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್ ತಂಡ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 216 ರನ್‌ಗಳನ್ನು ದಾಖಲಿಸಿತ್ತು. ಅಂತಿಮವಾಗಿ ಚೆನ್ನೈ ಸೂಪರ್‌ ಕಿಂಗ್ಸ್ ಗುರಿ ಮುಟ್ಟುವಲ್ಲಿ ವಿಫಲವಾಗಿತ್ತು.

ಈ ಪಂದ್ಯದಲ್ಲಿ ಐಪಿಎಲ್‌ ಟೂರ್ನಿಯಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಭಾರತದ ಮೊದಲ ಆಟಗಾರ ಎಂಬ ದಾಖಲೆಗೆ ಜಂಟಿಯಾಗಿ ಭಾಜನರಾಗಿದ್ದರು. ಈ ಇನಿಂಗ್ಸ್‌ನಲ್ಲಿ ಅವರು 9 ಸಿಕ್ಸರ್‌ ಹಾಗೂ ಒಂದು ಬೌಂಡರಿ ಸಿಡಿಸಿದ್ದರು.

ಆಸ್ಟ್ರೇಲಿಯಾ ತಂಡದ ಮಾಜಿ ಸ್ಪಿನ್ನರ್‌ ಹಾಗೂ ರಾಜಸ್ಥಾನ್‌ ರಾಯಲ್ಸ್ ತಂಡದ ಬ್ರ್ಯಾಂಡ್‌ ರಾಯಭಾರಿಯಾಗಿರುವ ಶೇನ್‌ ವಾರ್ನ್‌, ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ಕುರಿತು ಗುಣಗಾನ ಮಾಡಿದ್ದರು ಹಾಗೂ ಇಂತಹ ಬ್ಯಾಟ್ಸ್‌ಮನ್‌ ಭಾರತ ತಂಡದ ಮೂರೂ ಮಾದರಿಯಲ್ಲಿ ಆಡಿಸದೆ ಇರುವುದು ನನಗೆ ಅಚ್ಚರಿ ತಂದಿದೆ ಎಂದು ಹೇಳಿದರು.

“ಭಾರತ ತಂಡದ ಮೂರೂ ಮಾದರಿಯಲ್ಲಿ ಸಂಜು ಸ್ಯಾಮ್ಸನ್‌ ಆಡುತ್ತಿಲ್ಲ ಎಂಬ ವಿಷಯವನ್ನು ನಾನು ನಂಬುವುದಿಲ್ಲ. ಅವರು ಅದ್ಭುತ ಆಟಗಾರ. ಐಪಿಎಲ್‌ ಟೂರ್ನಿಯಲ್ಲಿ ಕೇರಳ ಆಟಗಾರನ ಪ್ರದರ್ಶನ ನೋಡಲು ತುಂಬಾ ಉತ್ಸುಕನಾಗಿದ್ದೇನೆ. ನಿಮ್ಮ ಉತ್ತಮ ಆಟಗಾರರು ಹೆಚ್ಚು ಎಸೆತಗಳನ್ನು ಆಡಬೇಕು. ನೀವು ನಮ್ಮ ತಂಡವನ್ನು ನೋಡುವುದಾದರೆ, ನಮ್ಮಲ್ಲಿ ಜೋಸ್‌ ಬಟ್ಲರ್‌, ಸ್ಟೀವನ್ ಸ್ಮಿತ್‌ ಹಾಗೂ ಸಂಜು ಸ್ಯಾಮ್ಸನ್ ಅವರು ಅತ್ಯುತ್ತಮ ಆಟಗಾರರಾಗಿದ್ದಾರೆ,” ಎಂದು ಶೇನ್‌ ವಾರ್ನ್‌ ಸ್ಟಾರ್‌ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ಸಂಜು ಸ್ಯಾಮ್ಸನ್‌ ತಮ್ಮ ಎರಡನೇ ಪಂದ್ಯದಲ್ಲಿಯೂ ಶೇನ್‌ ವಾರ್ನ್‌ಗೆ ನಿರಾಸೆ ಮೂಡಿಸಿಲ್ಲ. ಅವರು ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ 42 ಎಸೆತಗಳಲ್ಲಿ 85 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ರಾಜಸ್ಥಾನ್‌ ರಾಯಲ್ಸ್ ದಾಖಲೆಯ ಗುರಿ ಮುಟ್ಟಿತ್ತು.

ಈ ಹಿಂದೆ ಸಂಜು ಸ್ಯಾಮ್ಸನ್‌ ಟೀಮ್‌ ಇಂಡಿಯಾಗೆ ಅವಕಾಶ ನೀಡುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು ಹಾಗೂ ಅಭಿಮಾನಿಗಳು ಕೂಡ ಬಲಗೈ ಬ್ಯಾಟ್ಸ್‌ಮನ್‌ಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದರು. ಆದರೆ, 2015ರಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸಂಜು ಸ್ಯಾಮ್ಸನ್‌, ಕೇವಲ 4 ಪಂದ್ಯಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ಆವೃತ್ತಿಯಲ್ಲಿ ಕೇರಳ ಆಟಗಾರ ಸ್ಥಿರ ಪ್ರದರ್ಶನ ತೋರಿದ್ದೇ ಆದಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಆಯ್ಕೆದಾರರಿಗೆ ಸುಲಭವಾಗಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!