Bengaluru

ಸಚಿವ ಸಂಪುಟ ಪುನರ್ ರಚನೆ: ತೀವ್ರಗೊಳ್ಳಲಿದೆ ಆಕಾಂಕ್ಷಿಗಳ ಲಾಬಿ…

ಬೆಂಗಳೂರು,ಸೆ 28- ವಿಧಾನಮಂಡಲ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಮತ್ತೆ ದೆಹಲಿ ಪ್ರವಾಸಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೆಡಿಯಾಗಿದ್ದು, ಇದೀಗ ಮತ್ತೊಮ್ಮೆ ಸಚಿವ ಸಂಪುಟ ಪುನರ್ ರಚನೆ ಹುತ್ತಕ್ಕೆ ಕೈ ಹಾಕಿದ್ದಾರೆ.
ಬಹುತೇಕ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ದೆಹಲಿ ವರಿಷ್ಠರನ್ನು ಭೇಟಿಯಾಗಿ ಸಂಪುಟ ಪುನರ್ ರಚಿಸಲು ಮುಂದಾಗಿದ್ದಾರೆ. ತಮ್ಮ ಸಚಿವ ಸಂಪುಟದಿಂದ ನಾಲ್ಕೈದು ಮಂದಿಯನ್ನು ಕೈಬಿಟ್ಟು ಹಲವರಿಗೆ ಅವಕಾಶ ದೊರಕಿಸಿಕೊಡುವ ಆಲೋಚನೆ ಯಡಿಯೂರಪ್ಪ ಅವರದ್ದಾಗಿದ್ದು, ಇದಕ್ಕಾಗಿ ವರಿಷ್ಠರ ಹಸಿರು ನಿಶಾನೆಗಾಗಿ ದೆಹಲಿಯತ್ತ ಮುಖ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ ಮುಕ್ತಾಯವಾಗಿದೆ, ಸಂಪುಟ ವಿಸ್ತರಣೆ ಮಾಡಲು ಈಗ ಯಾವುದೇ ಸಮಸ್ಯೆ ಇಲ್ಲ. ಮೂರ್ನಾಲ್ಕು ದಿನಗಳಲ್ಲಿ ದೆಹಲಿಗೆ ತೆರಳುತ್ತೇನೆ. ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಮತ್ತೆ ಚರ್ಚೆ ನಡೆಸಲಿದ್ದೇನೆ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕ ಭಾಗದ ಪ್ರಬಲ ಆಕಾಂಕ್ಷಿಗಳಾದ ಉಮೇಶ್ ಕತ್ತಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಂಪುಟದಲ್ಲಿ ಅವಕಾಶ ದೊರಕಿಸಿಕೊಡುವ ಉಮೇದಿನಲ್ಲಿ ಯಡಿಯೂರಪ್ಪ ಅವರಿದ್ದಾರೆ.
ಬೆಳಗಾವಿಯಿಂದ ಶಶಿಕಲಾ ಜೊಲ್ಲೆ ಅವರನ್ನು ಕೈಬಿಟ್ಟು ಉಮೇಶ್ ಕತ್ತಿ ಅವರಿಗೆ ಅವಕಾಶ ದೊರಕಿಸಿಕೊಡುವುದು ಯಡಿಯೂರಪ್ಪ ಅವರ ಆಲೋಚನೆಯಾಗಿದೆ. ಸಿ.ಸಿ. ಪಾಟೀಲ ಅವರನ್ನು ಕೈಬಿಟ್ಟು, ಬಸನಗೌಡ ಪಾಟೀಲ ಯತ್ನಾಳಗೆ ಅವಕಾಶ ದೊರಕಿಸಿಕೊಡುವ ಉದ್ದೇಶವನ್ನು ಯಡಿಯೂರಪ್ಪ ಹೊಂದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಿ.,ಟಿ.ರವಿ ಸಂಪೂರ್ಣವಾಗಿ ಪಕ್ಷದಕೆಲಸಗಳಲ್ಲಿ ತೊಡಗಿಕೊಳ್ಳಲು ಬಯಸಿದ್ದು, ಇದಕ್ಕಾಗಿ ಸಚಿವ ಸ್ಥಾನಕ್ಕೆರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ. ಹೀಗಾಗಿ ಸಿ.ಟಿ.ರವಿ ಅವರ ಬದಲಿಗೆ ತಮ್ಮ ಆಪ್ತರಾದ ಅರವಿಂದ ಲಿಂಬಾವಳಿ ಅವರಿಗೆ ಅವಕಾಶ ಕಲ್ಪಿಸಲು ಯಡಿಯೂರಪ್ಪ ಉದ್ದೇಶಿಸಿದ್ದಾರೆ.
ಇನ್ನು ಕರಾವಳಿಯಲ್ಲಿ ಬಹು ಕಾಲದಿಂದ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಅಂಗಾರ ಅವರಿಗೆ ಸಚಿವ ಹುದ್ದೆ ದೊರಕಿಸಿಕೊಡಲು ಯಡಿಯೂರಪ್ಪ ಉದ್ದೇಶಿಸಿದ್ದು, ಇದಕ್ಕಾಗಿ ಕೋಟಾ ಶ್ರೀನಿವಾಸ ಪೂಜಾರಿ ಸಚಿವ ಸ್ಥಾನ ಖಾಲಿ ಮಾಡಬಹುದಾದ ಪರಿಸ್ಥಿತಿ ನಿರ್ಮಾಣವಾಗಬಹುದು.
ಕೇಂದ್ರದ ನಾಯಕರ ಸಮ್ಮತಿ ಪಡೆದು ಯಡಿಯೂರಪ್ಪ ಸಂಪುಟ ಪುನರ್ ರಚಿಸಲಿದ್ದಾರೆ. ಅಧಿವೇಶನಕ್ಕೂ ಮೊದಲು ಸಂಪುಟಕ್ಕೆ ಸರ್ಜರಿಮಾಡಲು ಯಡಿಯೂರಪ್ಪ ಬಯಸಿದ್ದರು. ಈ ಸಂಬಂಧ ದೆಹಲಿಗೂ ಹೋಗಿ ಬಂದಿದ್ದರು.ಆದರೆ ಕೊನೆ ಕ್ಷಣದಲ್ಲಿ ಸಂಪುಟ ವಿಸ್ತರಣೆಗೆ ಅನುಮತಿ ಸಿಗುವ ನಿರೀಕ್ಷೆ ಹುಸಿಯಾಗಿತ್ತು.ಇದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆಯಾಗಿತ್ತು.ಇದೀಗ ಅಧಿವೇಶನ ಮುಗಿಯುತ್ತಿದ್ದಂತೆ ಮತ್ತೆ ಸಿಎಂ ಹೆಹಲಿಗೆ ತೆರಳುವ ಕುರಿತು ಮಾತನಾಡಿದ್ದು, ಸಚಿವಾಕಾಂಕ್ಷಿಗಳಲ್ಲಿ ಮತ್ತೆ ಕನಸು ಚಿಗುರೊಡೆದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!