Bengaluru

ಬಿಜೆಪಿ ಮುಕ್ತಿಗಾಗಿ ಮತ್ತೊಂದು ಸ್ವಾತಂತ್ರ್ಯ ಹೋರಾಟ: ಡಿ.ಕೆ.ಶಿವಕುಮಾರ

ಬೆಂಗಳೂರು, ಸೆ.28-  ಇತಿಹಾಸ ಸೃಷ್ಟಿಸಿದ್ದು ಕಾಂಗ್ರೆಸ್. ಇತಿಹಾಸವನ್ನು ಕಿತ್ತುಕೊಳ್ಳುವುದು ಬಿಜೆಪಿ. ಅಂದು ಬ್ರಿಟಿಷ್ ರಿಂದ ಮುಕ್ತಿ ಹೊಂದಲು ಹೋರಾಟ ಮಾಡಿದ ಮಾದರಿಯಲ್ಲಿಯೇ ಪ್ರಸಕ್ತ ಬಿಜೆಪಿ ಸರ್ಕಾರಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ನಿರ್ದೇಶನ ಮೇರೆಗೆ ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತರುತ್ತಿರುವ ರೈತ ವಿರೋಧಿ, ಕಾರ್ಮಿಕ ವಿರೋಧಿ ತಿದ್ದುಪಡಿ ವಿರುದ್ಧ ಕೆಪಿಸಿಸಿ ನಾಯಕರು ಪ್ರತಿಭಟಿಸಿದರು.

ಹಸಿರು ಶಾಲು ಹೊದ್ದುಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರಗಳ ವಿರುದ್ಧ ಧ್ವನಿಯಾದರು. ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್ ,ಎಸ್ ಆರ್ ಪಾಟೀಲ್, ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ, ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಎಂ. ಪಿ. ಉಗ್ರಪ್ಪ, ಧ್ರುವನಾರಾಯಣ್, ಶಾಸಕ ಕೃಷ್ಣ ಬೈರೇಗೌಡ, ಯು ಟಿ ಖಾದರ್, ಮಾಜಿ ಸಚಿವೆ ಉಮಾಶ್ರೀ, ಜಯಮಾಲಾ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್, ಇಡೀ ದೇಶದಲ್ಲಿ ದೊಡ್ಡ ಬದಲಾವಣೆಯಾಗಲು ಹಸಿರುಕ್ರಾಂತಿ ಉಳಿಯಬೇಕು. ರೈತರನ್ನು , ಅನ್ನದಾತರನ್ನು ಉಳಿಸಬೇಕು. ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಸಿಎಎ, ಎನ್ ಆರ್ ಸಿ ಸೇರಿದಂತೆ ವಿವಿಧ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲಾಗಿದ್ದು, ಇದರ ವಿರುದ್ಧ ಅನೇಕ ಪ್ರತಿಭಟನೆಗಳಾಗಿವೆ. ಈಗಲೂ ಅದೇ ರೀತಿಯ ಪ್ರತಿಭಟನೆಗಳು ಸಿದ್ಧವಾಗುತ್ತಿವೆ. ಬ್ರಿಟಿಷರ ದೌರ್ಜನ್ಯಕ್ಕೆ ಪ್ರತಿಯಾಗಿ, ಅಂದಿನ ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಿತ್ತು. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಸತ್ಯಾಗ್ರಹ ಮಾಡಿದಾಗ ಬ್ರಿಟಿಷರು ಹಿಂದೆಹೋದರು ಎಂದರು.
ರೈತರನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಗುಲಾಮರನ್ನಾಗಿಸಲು ಬಿಜೆಪಿ ಮುಂದಾಗಿದೆ. ರೈತರ ಕರ್ನಾಟಕ ಬಂದ್ ಬೆಂಬಲಿಸಿ ಕಾಂಗ್ರೆಸ್ ಬೀದಿಗಿಳಿದಿದೆ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತರಕಾರಿ ಬೆಳೆಯುತ್ತಾರೆ.ಆದರೂ ರೈತರಿಗೆ ಕಡಿಮೆ ಬೆಲೆ ಸಿಗುತ್ತಿದೆ. ತಮ್ಮದು ಜನರ ಹೋರಾಟವಾಗಿದೆ. ಇದು ಜನರ ಧ್ವನಿ, ಈ ಧ್ವನಿ , ಈ ಕೂಗು ಯಶಸ್ವಿ ಕೂಗಾಗಬೇಕೆಂದು ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಭೂಸುಧಾರಣಾ ಕಾಯಿದೆಯನ್ನು ಇಡೀ ರಾಷ್ಟ್ರವೇ ಹೊಗಳಿತ್ತು. ಗೋಮಾಳದ ವಿಚಾರದಲ್ಲಿ ರೈತರಿಗಿದ್ದ ಸಮಸ್ಯೆಯನ್ನು ಕಾಂಗ್ರೆಸ್ ಸರಿಪಡಿಸಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಮಿತಿ ರಚಿಸಿ ಅರಣ್ಯ ಹಕ್ಕನ್ನು ಸರಳವಾಗಿ ನೀಡಲು ಹೆಜ್ಜೆಯಿಡಲಾಗಿತ್ತು ಎಂದರು.
ಮಾಜಿ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ವಿಧಾನಸಭೆಯಲ್ಲಿ ರೈತರ ಬಗ್ಗೆ ಮಾತನಾಡಲು ಸ್ಪೀಕರ್ ಮೂರು ನಿಮಿಷ ಸಹ ಅವಕಾಶ ಮಾಡಿಕೊಡಲಿಲ್ಲ. ಆದ್ದರಿಂದ ಸಭಾತ್ಯಾಗ ಮಾಡಿದ್ದೆ. ಈಗ ರೈತರ ಪರ ಮಾತನಾಡಲು ಶಿವಕುಮಾರ್ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದರು.
ಕಂದಾಯ ಸಚಿವ ಆರ್.ಅಶೋಕ್ ರೈತರಲ್ಲ. ಅವರು ರೈತ ವಿರೋಧಿ. ರೈತರಿಗೆ ಅಷ್ಟು ಸುಲಭವಾಗಿ ಜಮೀನು ಸಿಗಲಿಲ್ಲ, ನೂರಾರು ವರ್ಷಗಳ ಹೋರಾಟದ ಫಲದಿಂದ ಸಿಕ್ಕಿರುವ ಭೂಮಿಯ ಹಕ್ಕನ್ನು ಈಗ ಬಿಜೆಪಿ ನಾಯಕರು ಕಿತ್ತುಕೊಳ್ಳುವುದಕ್ಕೆ ಮುಂದಾಗಿದ್ದಾರೆ. ರೈತರಲ್ಲದವರಿಗೆ ಜಮೀನು ನೀಡಬಾರದು ಎಂದರು.
ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಮೀನು ಖರೀದಿಸುವವರು ಯಾರು ಕೂಡ ಕೃಷಿ ಮಾಡುವುದಿಲ್ಲ. ನೂರಾರು ಎಕರೆ ಜಮೀನು ತೆಗೆದುಕೊಂಡು ತಂತಿಬೇಲಿ ಹಾಕಿ , ಸ್ವಿಮಿಂಗ್ ಫೂಲ್ ಇಲ್ಲವೇ ಬೇರೇನೋ ನಿರ್ಮಿಸುತ್ತಾರೆ. ರೈತ ವಿರೋಧಿ ನೀತಿ ಸುಗ್ರಿವಾಜ್ಞೆ ಗೆ ಅವಕಾಶ ಕೊಡಬಾರದು ಎಂದರು.
ಕಿಸಾನ್ ಕಾಂಗ್ರೆಸ್ ಘಟಕ ಅಧ್ಯಕ್ಷ ಸಚಿನ್ ಮೀಗಾ ಮಾತನಾಡಿ, ಪ್ರಧಾನಿ ಮೋದಿಯದ್ದು ಬರೀ ಪೊಳ್ಳು ಹೇಳಿಕೆ. ಪ್ರಧಾನಿ ಬಹಳಷ್ಟು ಖಾಸಗಿ ಉದ್ಯೋಗಿಗಳ ಜೊತೆಗೆ ಸಖ್ಯ ಬೆಳೆಸಿದ್ದಾರೆ. ಅವರ ಬಲಗಡೆ ಅದಾನಿ, ಎಡಗಡೆ ಅಂಬಾನಿ ಇದ್ದಾರೆ. ಬಿಜೆಪಿಗರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆಂದು ಆರೋಪಿಸಿದರು.
ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಒಟ್ಟಿಗೆ ಸೇರಿ ಹೋರಾಟ ಮಾಡುತ್ತಿದ್ದಾರೆ. ರೈತರು ಬದುಕಿದ್ದು ಸಿದ್ದರಾಮಯ್ಯ ನೀಡಿದ ಅಕ್ಕಿಯಿಂದ. ದೇಶದಲ್ಲಿ ಹಲವಾರು ಮಂದಿ ಪ್ರಧಾನಿಗಳಾಗಿ ಹೋಗಿದ್ದಾರೆ. ಆದರೆ ರೈತರ ದುಡ್ಡು ಹೊಡೆದಿದ್ದು ಮಾತ್ರ ಮೋದಿ ಸರ್ಕಾರ. ಸುಮಾರು 58 ಸಾವಿರ ಕೋಟಿ ರೈತರ ಹಣ ಲೂಟಿ ಹೊಡೆದು, ಯೂನಿವರ್ಸಲ್ ಸೋಂಪೋ ಎಂಬ ಕಂಪನಿಗೆ ಹಣ ಕಳುಹಿಸಿದ್ದಾರೆ. ಪ್ರಧಾನಿ ಮೋದಿಗೆ ನಾಚಿಕೆ ಆಗಬೇಕು ಎಂದು ಹರಿಹಾಯ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!