Editorial

ಬಾಲಸುಬ್ರಹ್ಮಣ್ಯಂ ನೆನಪು

ಕೊರೋನಾ ಸಾವಿನ ಅಲೆ ಅಪ್ಪಳಿಸುತ್ತ ಇರುವ ರೀತಿಯೇ ಭೀಕರ. ಒಂದು ಅಲೆಯ ಹೊಡೆತದಿಂದ ಚೇತರಿಸಿಕೊಳ್ಳುವ ಮುಂಚೆಯೇ ಇನ್ನೊಂದು ದೊಡ್ಡ ಅಲೆ ಅಪ್ಪಳಿಸಿ ಮತ್ತಿಷ್ಟು ಆಳದ ದುಃಖದ ಮಡುವಿಗೆ ನೂಕುತ್ತದೆ. ಬಾಲಸುಬ್ರಹ್ಮಣ್ಯಂ ಸಾವನ್ನು ಕುರಿತು ಹೀಗೆ ಹೇಳುವುದೇ ಸರಿ ಅನಿಸುತ್ತದೆ. ಇನ್ನೂ ಇರುತ್ತಾರೆ ಎಂದುಕೊಂಡಿದ್ದ ಹೊತ್ತಿನಲ್ಲಿ ಅವರು ನಮ್ಮನ್ನು ಅಗಲಿದರು. 52 ದಿನಗಳ ಅವರ ಸಾವು ಬದುಕಿನ ಹೋರಾಟದ ಹಾಗೆಯೇ ಅವರ ಬದುಕು ಇತ್ತು.

ಹುಟ್ಟಿದ್ದು ಆಂಧ್ರದ ನೆಲ್ಲೂರು. ಓದಿದ್ದು ಇಂಜಿನೀಯರಿಂಗ. ಬಾಲಕರಿದ್ದಾಗಿನಿಂದಲೇ ಮೊಹಮ್ಮದ ರಫಿ ಅವರ ಗಾಯನ ಅವರ ಮೇಲೆ ಗಾಢ ಪ್ರಭಾವ ಬೀರಿತ್ತು. ಹೆಜ್ಜೆ ಹೆಜ್ಜೆಗೆ ರಫಿ ಅವರನ್ನು ನನ್ನ ಗುರು, ನನ್ನ ದೇವರು ಅನ್ನುತ್ತಿದ್ದರು. ಅನಂತಪುರದಿಂದ ಕಾಲೇಜು ವಿದ್ಯಾಭ್ಯಾಸ ಮುಂದುವರಿಸಲು ಮದ್ರಾಸಿಗೆ ತೆರಳಿದಾಗ, ಇವರ ಗಾಯನ ವೃತ್ತಿಯ ಬಾಗಿಲು ತೆರೆದುಕೊಂಡಿತು. ಯುವ ಸಂಗೀತ ಪ್ರತಿಭೆ ಗುರುತಿಸುವ ಸ್ಪರ್ಧೆಯಲ್ಲಿ ಇವರಿಗೆ ಮೊದಲ ಸ್ಥಾನ. ತೀರ್ಪುಗಾರರಾಗಿದ್ದವರು ತೆಲುಗಿನ ಜನಪ್ರಿಯ ಗಾಯಕ ಘಂಟಸಾಲ ಮತ್ತು ಸಂಗೀತ ನಿರ್ದೇಶಕ ಕೋದಂಡಪಾಣಿ. ಮೊದಲು ಹಾಡಿದ್ದು ‘ಮರ್ಯಾದ ರಾಮಣ್ಣ’ ಚಿತ್ರಕ್ಕೆ. ಅದರ ಸಂಗೀತ ನಿರ್ದೇಶಕರು ಕೋದಂಡಪಾಣಿ. ಅಷ್ಟೇ ಅಲ್ಲ, ಮತ್ತೊಬ್ಬ ಸಂಗೀತ ದಿಗ್ಗಜ ಎಂ. ಎಸ್. ವಿಶ್ವನಾಥನ್ ಅವರು ‘ಶಂಕರಾಭರಣಂ’ ಚಿತ್ರದ ಹಾಡನ್ನು ಈ ಯುವಕನಿಂದಲೇ ಹಾಡಿಸುವಂತೆ ಒತ್ತಾಯಿಸಿದರು. ಬಾಲು ಶಾಸ್ತ್ರೀಯ ಸಂಗೀತ ಕಲಿತಿರಲಿಲ್ಲ. ಅವರಿಗೂ ಒಲ್ಲದ ಮನಸ್ಸು, ಸಂಗೀತ ನಿರ್ದೇಶಕರಿಗೂ ಗೊಂದಲ. ಕೊನೆಯಲ್ಲಿ ಆ ಚಿತ್ರದ ಎಲ್ಲ ಹಾಡು ಬಾಲು ಹಾಡಿ ಗೆದ್ದರು. ಚಿತ್ರದ ‘ಓಂಕಾರನಾದಾನುಸಾಂಧಾನಮು’ ಹಾಡಿಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು. ಇನ್ನೊಂದು ರಾಷ್ಟ್ರ ಪ್ರಶಸ್ತಿ ಗಳಿಸಿದ್ದು ಕನ್ನಡದ ‘ಗಾನಯೋಗಿ ಪಂಚಾಕ್ಷರ ಗವಾಯಿ’ ಚಿತ್ರಕ್ಕೆ. ಅವರು ಹಾಡಿದ್ದು ಹಿಂದೂಸ್ತಾನಿ ರಾಗ ಆಧಾರಿತ ‘ಅಮಂಡು ಘುಮಂಡು’ ಹಾಡಿಗೆ. ಶಾಸ್ತ್ರೀಯ ಸಂಗೀತದ ತಳಹದಿ ಇಲ್ಲದ ವ್ಯಕ್ತಿಯೊಬ್ಬ ಶಾಸ್ತ್ರೀಯ ಸಂಗೀತ ರಾಗ ಆಧರಿಸಿ ರೂಪಿಸಿದ ಹಾಡುಗಳನ್ನು ಹಾಡಿ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಇನ್ನೊಂದು ಉದಾಹರಣೆ ಇಲ್ಲ.

ನಲವತ್ತು ಸಾವಿರ ಹಾಡುಗಳು, ಹದಿನಾರು ಭಾಷೆ. ಕನ್ನಡದಲ್ಲಿಯೇ 19 ಸಾವಿರ ಹಾಡು. ಆರು ರಾಷ್ಟ್ರ ಪ್ರಶಸ್ತಿ. ನಲವತ್ತು ಸಿನಿಮಾಗಳಲ್ಲಿ ಅಭಿನಯ. ರಜನೀಕಾಂತ, ಕಮಲ ಹಾಸನ್ ಅಭಿನಯದ ತಮಿಳು ಚಿತ್ರಗಳು ತೆಲುಗಿಗೆ ಡಬ್ ಆದಾಗ, ಅವುಗಳಿಗೆ ಧ್ವನಿ ನೀಡಿದ್ದು, ಟಿವಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಹೀಗೆ ಐವತ್ತು ವರ್ಷ ಕಾಲ ಸಿನಿಮಾದ ವಿವಿಧ ಕ್ಷೇತ್ರಗಳಲ್ಲಿ ಒಡನಾಡಿದ ಅವರಿಗೆ ತಾನು ಶಾಸ್ತ್ರೀಯ ಸಂಗೀತ ಮೊದಲೇ ಕಲಿಯಲಿಲ್ಲ ಎಂಬ ಕೊರಗು. ಆನಂತರ ಕಲಿತು ಕಚೇರಿಯೊಂದು ನಡೆಸಬೇಕು ಎಂಬ ಆಸೆ ಈಡೇರಲೇ ಇಲ್ಲ.

ಕನ್ನಡದ ಮಟ್ಟಿಗೆ ಅವರು ಬಹು ಬೇಡಿಕೆಯ ಗಾಯಕ. ಒಂದು ದಿನಕ್ಕೆ ಕನಿಷ್ಠ ಹತ್ತು ಹಾಡು ಹಾಡಿ ಮುಗಿಸುತ್ತಿದ್ದ ಅವರು ಅಪರೂಪಕ್ಕೆ ಅದಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದೂ ಇದೆ. ಇತ್ತೀಚಿನ ದಿನಗಳಲ್ಲಿ ಟ್ರ್ಯಾಕ್ ಮಾತ್ರ ಹಾಡಿ ಹೊರನಡೆಯಲು ಅನುಕೂಲ ಇರುವುದರಿಂದ ಈ ವೇಗ ಸಾಧ್ಯ ಆಯಿತು. ಇದೆಲ್ಲಕ್ಕಿಂತ ಮಿಗಿಲಾಗಿ ಅವರಲ್ಲಿ ಇದ್ದ ಬಹುದೊಡ್ಡ ಪ್ರತಿಭೆ ಅಣಕು ಮಾಡುವುದು. ಧ್ವನಿ, ಮಾತು ಒಮ್ಮೆ ಕಿವಿಗೆ ಬಿದ್ದರೆ ಸಾಕು ಅದನ್ನು ತದ್ವತ್ತಾಗಿ ಅನುಕರಿಸಿ ಅಚ್ಚರಿ ಮೂಡಿಸುತ್ತ ಇದ್ದರು.

ಕನ್ನಡ ಜನ ಇವರನ್ನು ಒಪ್ಪಿದ ಹಾಗೆ ತಮಿಳು ಬಾಂಧವರು ಒಪ್ಪಲಿಲ್ಲ. ಸಂಗೀತ ನಿರ್ದೇಶಕರೊಬ್ಬರು ‘ನೀನು ಮೊದಲು ತಮಿಳು ಸರಿಯಾಗಿ ಕಲಿತು ಬಾ’ ಎಂದು ಹೇಳಿ ಕಳಿಸಿದ್ದು ಕೂಡ ನಡೆಯಿತು. ಅದರಿಂದ ಹಟ ತೊಟ್ಟು ತಮಿಳು ಕಲಿತರು. ಆದರೆ ಅದೇ ಮಟ್ಟದ ಶ್ರದ್ಧೆ ಕನ್ನಡದ ಬಗ್ಗೆ ಸಾಧ್ಯ ಆಗಲಿಲ್ಲ. ಅವರು ಇತ್ತೀಚಿಗೆ ನಿರ್ಮಿಸಿದ ‘ಸಿಂಪ್ಲಿ ಬಾಲು’ ವಿಡಿಯೋ ಸರಣಿಯಲ್ಲಿ ಡಾ. ರಾಜಕುಮಾರ ಕುರಿತು ಕನ್ನಡದಲ್ಲಿ ಮಾತಾಡುವಾಗ ಪದಗಳಿಗಾಗಿ ತಡಕಾಡುವುದನ್ನು ಗಮನಿಸಿದಾಗ, ನಮ್ಮವರು ಕೂಡ ಭಾಷೆ ಕುರಿತು ಅವರನ್ನು ಒತ್ತಾಯಿಸಬೇಕಿತ್ತು ಅನಿಸುತ್ತದೆ.

ಅವರಿಗೆ ಒಗ್ಗದ ಭಾವಗೀತೆ ಹಾಡಿಸುವುದು, ಜನಮಾನಸದಲ್ಲಿ ನೆಲೆಯೂರಿದ್ದ ಅಶ್ವಥ ಮತ್ತು ಮೈಸೂರು ಅನಂತಸ್ವಾಮಿ ಹಾಡಿದ್ದ ’ಮೈಸೂರು ಮಲ್ಲಿಗೆ’ ಸರಣಿಯ ಭಾವಗೀತೆಗಳನ್ನು ಸಿನೆಮಾಗಾಗಿ ಅವರಿಂದ ಹಾಡಿಸಿದ್ದು ನೋಡಿದಾಗ ಅವಸರದ ಅಡುಗೆ ಅನಿಸಿದ್ದು ಸಹಜ. ಅವರೊಮ್ಮೆ ಹಾಡಿದ್ದು ಸರಿ ಇಲ್ಲ ಎಂದು ಹೇಳುವ ಧೈರ್ಯ ನಮ್ಮಲ್ಲಿ ಬಹಳಷ್ಟು ಜನರಿಗೆ ಇರಲಿಲ್ಲ. ಅಂಥ ಹೊತ್ತು ‘ಶ್ರೀನಿವಾಸ ಕಲ್ಯಾಣ’ ಸಿನಿಮಾದ ಭಾವಪೂರ್ಣ ಹಾಡನ್ನು ಮರಳಿ ಹಾಡಿಸಬೇಕು ಎಂಬ ಒತ್ತಾಯ ಬಂದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬೇಕು. ಇದೆಲ್ಲ ಏಕೆ ಮುಖ್ಯ ಎಂದರೆ ‘ಶಂಕರಾಭರಣಂ’ನಲ್ಲಿ ಅವರು ಹಾಡಿದ ರಾಗ ಆಧಾರಿತ ಗೀತೆಗಳನ್ನು ಒಪ್ಪಿದ ಹಾಗೇ ಅಲ್ಲಿನ ದೋಷಗಳನ್ನು ಎತ್ತಿ ತೋರಿಸಿದ ಸಂಗೀತ ವಿದ್ವಾಂಸರೂ ಇದ್ದರು. ಹಾಗಾಗಿಯೇ ಅವರು ತೆಲುಗಿನಲ್ಲಿ ಅತ್ಯುತ್ತಮ ಕೊಡುಗೆ ಕೊಡುವುದು ಸಾಧ್ಯ ಆಯಿತು. ಶಂಕರಾಭರಣಂ ಅಲ್ಲದೇ ‘ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರ ವೀಣಾ’ ಸಿನಿಮಾಗಳ ಹಾಡಿಗೂ ರಾಷ್ಟ್ರಪ್ರಶಸ್ತಿ ಗಳಿಸಿದ್ದು ಇಲ್ಲಿ ಗಮನಿಸಬೇಕು. ತಮಿಳು ಸರಿಯಾಗಿ ಕಲಿತು ಬಾ ಎಂದು ಹೇಳಿಸಿಕೊಂಡಿದ್ದ ಇವರು ಅದೇ ತಮಿಳಿನ ‘ಮಿನ್ಸಾರ ಕನವು’ ಚಿತ್ರದ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದರು.

ಬಾಲಸುಬ್ರಹಣ್ಯಂ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರೂ ದಾಖಲಿಸುವಂಥ ಅವಕಾಶ ಪಡೆದಿದ್ದು ತೆಲುಗಿನ ‘ಮಿಥುನಂ’ ಚಿತ್ರದಲ್ಲಿ. ವೃದ್ಧಾಪ್ಯದಲ್ಲಿ ದಂಪತಿಗಳ ಅನ್ಯೋನ್ಯ ಬಾಳುವೆ ನಿರೂಪಿಸುವ ಈ ಕಾದಂಬರಿ ಆಧಾರಿತ ಚಿತ್ರ ನಿರ್ದೇಶಿಸಿದ್ದು ತನಿಕೆಳ್ಳ ಭರಣಿ. ಇದರಲ್ಲಿ ಅವರ ಜೊತೆ ನಟಿಸಿದ್ದು ಲಕ್ಷ್ಮಿ. ಅವರ ಎಲ್ಲ ಸಿನಿಮಾಗಳಿಗಿಂತ ಅದ್ಭುತ ಅಭಿನಯ ಅಲ್ಲಿ ಕಾಣಿಸಿತು. ಅಂಥ ಜೀವವೊಂದು ತನ್ನ ಪಯಣ ಮುಗಿಸಿದೆ. ಈ ಹೊತ್ತು ನಾವು ಕೇಳಿಕೊಳ್ಳಬೇಕಿದೆ, ಅವರಂಥ ಇನ್ನೊಬ್ಬ ಗಾಯಕನನ್ನು ಕನ್ನಡದಲ್ಲಿ ಗುರುತಿಸಿ ಬೆಳೆಸುವ ಕೆಲಸ ಏಕೆ ಆಗಲಿಲ್ಲ. ನಮ್ಮ ಹುಡುಗರು ಬರೀ ಟ್ರ್ಯಾಕ್ ಸಿಂಗರ್ ಆಗಿ ಜೀವ ಸವೆಸುತ್ತಾ ಉಳಿದರು. ಎಷ್ಟೋ ವೇಳೆ ಬಾಲು ಅವರೇ ಟ್ರ್ಯಾಕ್ ಕೇಳಿ, ಇದನ್ನೇ ಉಳಿಸಿಕೊಳ್ಳಿ, ನಾನು ಈ ಹಾಡು ಹಾಡುವುದಿಲ್ಲ ಎಂದು ಪಟ್ಟು ಹಿಡಿದು ನಮ್ಮ ಹುಡುರಿಗೆ ಅವಕಾಶ ಮಾಡಿಕೊಟ್ಟಿದ್ದು ಇದೆ. ನಮ್ಮಲ್ಲಿ ಅಂಥ ಪ್ರತಿಭಾವಂತರೇ ಇರಲಿಲ್ಲವೇ ಅಥವಾ ಅಂಥವರನ್ನು ಗುರುತಿಸಿ ಬೆಳೆಸುವ ಕೋದಂಡಪಾಣಿ ಅವರಂಥವರು ನಮ್ಮಲ್ಲಿ ಇರಲಿಲ್ಲವೇ? ಅಥವಾ ಅವಸರದ ಅಡುಗೆ ತಯಾರಿಸುವುದೇ ನಿಯಮದಂತಾಗಿ ಕ್ರಿಯಾಶೀಲತೆಗೆ ಪೆಟ್ಟು ಬಿತ್ತೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಎಸ್ ಪಿ ಬಾಲಸುಬ್ರಮಣ್ಯಂ ಅವರನ್ನು ನಿಜವಾದ ಅರ್ಥದಲ್ಲಿ ಗೌರವಿಸಿದಂತೆ.

Leave a Reply

Your email address will not be published. Required fields are marked *

Back to top button
error: Content is protected !!