Chennai

ಗಾನ ಸರಸ್ವತಿಯ ಮಡಿಲು ಸೇರಿದ ಸ್ವರ ಮಾಂತ್ರಿಕ

ಚೆನ್ನೈ, ಸೆ 26- ಸ್ವರ ಮಾಂತ್ರಿಕ, ನಟ, ಸಂಗೀತ ಸಂಯೋಜಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದೆ. ಸಾವಿರಾರು ಹಾಡುಗಳ ಸರದಾರ ಸಪ್ತಸ್ವರವೇರಿ ಗಾನ ಸರಸ್ವತಿಯ ಮಡಿಲು ಸೇರಿದ್ದಾರೆ.

ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕ್ಕಂನ ರೆಡ್ ಹಿಲ್ಸ್ ಬಳಿಯ ಎಸ್ ಪಿ ಬಿ ಅವರ ಪ್ರೀತಿಯ ತೋಟದ ಮನೆಯಲ್ಲಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಹೈದರಾಬಾದ್ ನಿಂದ ಆಗಮಿಸಿದ್ದ ಪುರೋಹಿತರ ತಂಡದ ನೇತೃತ್ವದಲ್ಲಿ ಪುತ್ರ ಎಸ್ ಪಿ ಚರಣ್ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರೆವೇರಿಸಿದರು.

ಪೊಲೀಸರು ಮೂರು ಸುತ್ತಿನ ಕುಶಾಲುತೋಪು ಹಾರಿಸಿ ಅಂತಿಮ ಗೌರವ ಸಲ್ಲಿಸದ ನಂತರ ಎಸ್ ಪಿಬಿಯವರ ಪಾರ್ಥಿವ ಶರೀರವನ್ನು ಭೂ ದೇವಿಯ ಮಡಿಲಲ್ಲಿ ಮಲಗಿಸಲಾಯಿತು.
ಧಾರ್ಮಿಕ ವಿಧಿ ವಿಧಾನಕ್ಕೂ ಮೊದಲು ಫಾರ್ಮ್ ಹೌಸ್ ಬಳಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅಹಿತಕರ ಘಟನೆಗೆ ಅವಕಾಶವಾಗದಂತೆ ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ರಜನಿಕಾಂತ್, ಚಿರಂಜೀವಿ, ಕಮಲ್ ಹಾಸನ್, ಅರ್ಜುನ್ ಸರ್ಜಾ, ನಟ ವಿಜಯ್ ಸೇರಿದಂತೆ ದಕ್ಷಿಣ ಭಾರತದ ಸಿನಿಮಾ ಗಣ್ಯರು ಮತ್ತು ರಾಜಕೀಯ ಗಣ್ಯರು ಎಸ್ ಪಿ ಬಿ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದರು.

ಕಳೆದ ಒಂದು ತಿಂಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ತೀವ್ರಾ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಸೆಪ್ಟಂಬರ್ 25ರಂದು ಮಧ್ಯಾಹ್ನ 1.04ಕ್ಕೆ ಕೊನೆಯುಸಿರೆಳೆದರು.

ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆ ಸೇರಿದಂತೆ ಸುಮಾರು 16 ಭಾಷೆಯಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಎಸ್ಪಿಬಿ ಹಾಡಿದ್ದಾರೆ. ಅತಿ ಹೆಚ್ಚು ಹಾಡಿಗೆ ಧ್ವನಿಯಾಗಿದ್ದ ಎಸ್ಪಿಬಿ ಅವರು ಗಿನ್ನಿಸ್ ದಾಖಲೆಗೆ ಸಹ ಪಾತ್ರರಾಗಿದ್ದಾರೆ. ತಮ್ಮ ಗಾಯನಕ್ಕಾಗಿ ಆರು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. 25 ಬಾರಿ ಆಂಧ್ರ ಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ನಂದಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯ ಸರ್ಕಾರಗಳು ನೀಡುವ ರಾಜ್ಯ ಪ್ರಶಸ್ತಿಗಳು ಸಹ ಪಡೆದಿದ್ದಾರೆ. ಚಿತ್ರರಂಗದಲ್ಲಿ ಎಸ್ಪಿಬಿ ಅವರ ಕೊಡುಗೆಗೆ ಗೌರವಿಸಿ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಸಹ ಲಭಿಸಿದೆ

Leave a Reply

Your email address will not be published. Required fields are marked *

Back to top button
error: Content is protected !!