Editorial

ಸಿನೆಮಾ ಮೇಲೆ ಕಾಕದೃಷ್ಟಿ

ಸಾಹಿತ್ಯ, ಸಿನೆಮಾ, ನಾಟಕ ಎಂದರೆ ಆಳುವ ಜನರಿಗೆ ಒಳಗೊಳಗೇ ಭಯ. ಈ ಮಾಧ್ಯಮಗಳು ಜನರ ಮೇಲೆ ಗಾಢ ಪ್ರಭಾವ ಬೀರಿ ಆಡಳಿತದ ಕುಂದುಗಳನ್ನು ಪ್ರಶ್ನಿಸಲು, ಪ್ರತಿಭಟಿಸಲು ಮುಂದಾಗುವಂತೆ ಮಾಡುತ್ತವೆ. ಇದನ್ನು ಮನಗಂಡೇ ಬ್ರಿಟಿಷರು ಸೆನ್ಸಾರ್ ನಿಯಮ ಜಾರಿಗೆ ತಂದರು. ಆಗ ನಾಟಕಗಳ ಹಸ್ತಪ್ರತಿ ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿ ಪ್ರದರ್ಶನಕ್ಕೆ ಅನುಮತಿ ಪಡೆಯಬೇಕಿತ್ತು. ಆವತ್ತು ಮಾಡಿದ ಪಳೆಯುಳಿಕೆಯಂಥ ಕಾನೂನುಗಳು ಈಗಲೂ ಜಾರಿಯಲ್ಲಿ ಇವೆ. ಅವನ್ನು ಬಳಸಿಕೊಂಡೇ ನಮ್ಮ ಸರ್ಕಾರಗಳು ತನಗಾಗದ ವಿಚಾರ ಮಂಡಿಸುವ ಮಾಧ್ಯಮಗಳನ್ನು ಸಾಮ, ದಾನ, ಭೇದ ಮತ್ತು ದಂಡೋಪಾಯಗಳಿಂದ ಒಲಿಸಿಕೊಳ್ಳುತ್ತವೆ.

ಇದು ಯಾವತ್ತಿನಿಂದಲೂ ಇರುವ ಸಂಗತಿ. ಎಪ್ಪತ್ತರ ದಶಕದಲ್ಲಿ ಇಂದಿರಾ ಗಾಂಧಿ ಅವರ ಆಡಳಿತದ ವಿರುದ್ಧ ಪ್ರಬಲ ಅಲೆ ಎದ್ದ ಹೊತ್ತು ಎಲ್ಲ ಮಾಧ್ಯಮಗಳನ್ನು ತುಳಿದಿಡುವ ಪ್ರಯತ್ನ ನಡೆಯಿತು. ರಾಜಕಾರಣದ ಪ್ರತಿಬಿಂಬದಂತೆ ಇವೆ ಎಂಬ ಅನುಮಾನದ ಮೇಲೆ ‘ಕಿಸ್ಸಾ ಕುರ್ಸಿ ಕಾ’ ಮತ್ತು ‘ಆಂಧಿ’ ಚಿತ್ರಗಳು ಪ್ರದರ್ಶನ ಕಾಣದಂತೆ ಮಾಡುವ ಷಡ್ಯಂತ್ರ ನಡೆಯಿತು. ಕನ್ನಡದ ‘ಅಂತ’ ಚಿತ್ರ ಕೂಡ ಬಹಿಷ್ಕರಿಸಬೇಕೆಂಬ ಒತ್ತಡ ಕಾಣಿಸಿಕೊಂಡಿತ್ತು.

ಇತ್ತೀಚೆಗೆ ಕೇಂದ್ರದ ಅಧಿಕಾರ ಬಲಪಂಥೀಯ ಪಕ್ಷಗಳ ಪಾಲಾದ ಮೇಲೆ ಮಾಧ್ಯಮಗಳನ್ನು ಹಣಿಯುವ ಕೆಲಸ ನಡೆದಿದೆ. ಬಹಳಷ್ಟು ವಾಹಿನಿ ಮತ್ತು ಪತ್ರಿಕೆಗಳನ್ನು ನಡೆಸುವವರು ಉದ್ಯಮಿಗಳೇ ಆದ್ದರಿಂದ ಸರ್ಕಾರದ ನಿಲುವನ್ನು ಬೇಷರತ್ತಾಗಿ ಬೆಂಬಲಿಸಲು ಅವರೆಲ್ಲ ತಯಾರಾಗೇ ಇದ್ದರು. ಆದರೆ ಸಿನೆಮಾ ಮತ್ತು ಕೆಲವು ವಾಹಿನಿಗಳು ಮತ್ತು ಡಿಜಿಟಲ್ ಮೀಡಿಯಾದ ಹಲವರು ಪ್ರಜಾಹಿತಕ್ಕೆ ನಿಷ್ಠರಾಗಿ ನಡೆದುಕೊಳ್ಳುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪರೋಕ್ಷವಾಗಿಯೇ ಕಾರ್ಯಾಚರಣೆಗೆ ಸರ್ಕಾರ ಇಳಿದಿದೆ. ಅದರಲ್ಲೂ ಬಹುಶೀಘ್ರ ಪರಿಣಾಮ ತೋರುವ ಸಿನೆಮಾ ಮಾಧ್ಯಮದ ವಿರೋಧಿ ಧ್ವನಿ ಮಣಿಸಲು ಮತ್ತು ಸಿನೆಮಾ ಜನ ತಮ್ಮ ಸೂಚನೆಯಂತೆ ನಡೆದುಕೊಳ್ಳುವ ಹಾಗೆ ಮಾಡುವ ದಿಶೆಯಲ್ಲಿ ಡ್ರಗ್ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಅನುಮಾನ ಗಾಢವಾಗುತ್ತಿದೆ.

ಈ ಹಿಂದೆಯೂ ವಿರೋಧಿ ದನಿಗಳನ್ನು ಸದ್ದಿಲ್ಲದೇ ಹತ್ತಿಕ್ಕುವ ಕೆಲಸ ಇದೇ ಸರ್ಕಾರ ಮತ್ತು ಅದರ ಪರ ನಿಂತ ಜನಗಳಿಂದ ನಡೆದಿತ್ತು. ಗುಜರಾತ್‍ಗೆ ನರ್ಮದಾ ನದಿ ನೀರು ಬಿಡುಗಡೆ ವಿರೋಧಿಸಿದರು ಎಂದು ಅಮೀರ ಖಾನ ಅಭಿನಯದ ಚಿತ್ರ ಆ ರಾಜ್ಯದಲ್ಲಿ ಬಿಡುಗಡೆ ಕಾಣದಂತೆ ಮಾಡಲಾಯಿತು. ಆತನ ಹೆಂಡತಿ ದೇಶದಲ್ಲಿ ಅಸುರಕ್ಷಿತ ಭಾವನೆ ಇದೆ ಎಂಬ ಹೇಳಿದ್ದೇ ದೊಡ್ಡ ಪ್ರಮಾದ ಎನಿಸಿಕೊಂಡು ನಟನ ಮೇಲೆ ತೀವ್ರ ವಾಗ್ದಾಳಿ ನಡೆಯಿತು. ಇತ್ತೀಚೆಗೆ ಅಮೀರ ಖಾನ ಸಿನಿಮಾ ಚಿತ್ರೀಕರಣಕ್ಕೆ ಟರ್ಕಿಗೆ ತೆರಳಿದ್ದ ವೇಳೆ ಅಲ್ಲಿನ ಅಧ್ಯಕ್ಷರ ಪತ್ನಿಯನ್ನು ಭೇಟಿ ಮಾಡಿದ್ದು ಮಹಾಪರಾಧ ಎಂಬಂತೆ ಬಿಂಬಿಸುವ ಯತ್ನ ನಡೆಯಿತು. ಇನ್ನೊಂದೆಡೆ ಅವರನ್ನು ಸ್ನ್ಯಾಪ್‍ಡೀಲ್ ಜಾಹೀರಾತು ರಾಯಭಾರಿ ಹುದ್ದೆಯಿಂದ ತೆಗೆಯುವಂತೆ ಮಾಡಲಾಯಿತು. ಸರ್ಕಾರದ ‘ಅತಿಥಿ ದೇವೋಭವ’ ಜಾಹೀರಾತುಗಳಿಂದ ಕೈ ಬಿಡಲಾಯಿತು. ರಾಫೇಲ್ ಖರೀದಿಯಲ್ಲಿ ಹಗರಣವಾಗಿದೆ ಎಂದು ವರದಿ ಪ್ರಕಟಿಸಿದ ದಿ ಹಿಂದೂ ಪತ್ರಿಕೆಗೆ ಶೇಕಡಾ 75 ರಷ್ಟು ಜಾಹೀರಾತು ಕಡಿಮೆ ಮಾಡಲಾಗಿದೆ ಎಂದು ಎನ್ ರಾಮ್ ಅವರೇ ಹೇಳಿಕೆ ನೀಡಿದ್ದಾರೆ. ಅದರಂತೆ ಸರ್ಕಾರದ ವಿರುದ್ಧ ಸುದ್ದಿ ಮಾಡಿದ ಪುಣ್ಯಪ್ರಸೂನ ಬಾಜಪೇಯಿಯಂಥ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ.

ಅದರಂತೆ ಸರ್ಕಾರದ ನಿಲುವುಗಳನ್ನು ಟೀಕಿಸುತ್ತಿರುವ ನಿರ್ದೇಶಕ ಅನುರಾಗ ಕಶ್ಯಪ್ ಮತ್ತು ನಟ ಪ್ರಕಾಶ ರೈ ದೇಶದ ಮಹಾನ್ ಶತ್ರುಗಳೆಂಬ ಭಾವನೆ ಬಿತ್ತುವ ಕೆಲಸ ನಡೆದಿದೆ. ಪ್ರಕಾಶ ರೈ ಕನ್ನಡದ ಕೆಜಿಎಫ್ ಭಾಗ 2ರಲ್ಲಿ ಅಭಿನಯಿಸುವುದನ್ನು ವಿರೋಧಿಸುವ ಕೆಲಸವೂ ನಡೆದಿದೆ. ದೇಶದ ಈ ಪ್ರತಿಭಾನ್ವಿತ ನಟನಿಗೆ ಚಿತ್ರಗಳೇ ದೊರೆಯದಂತೆ ಮಾಡಲಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಜೆಎನ್‍ಯು ಪ್ರತಿಭಟನೆ ವೇಳೆ ಹಾಜರಿದ್ದ ದೀಪಿಕಾ ಪಡುಕೋಣೆ ಅವರನ್ನು ಡ್ರಗ್ ಹಗರಣದಲ್ಲಿ ಥಳುಕು ಹಾಕಿ ವಿಚಾರಣೆಗೆ ಕರೆಯಲಾಗಿದೆ. ಆಕೆಗೆ ಸರ್ಕಾರದಿಂದ ಮತ್ತು ಅದರ ಬೆಂಬಲಿಗರಿಂದ ತೊಂದರೆ ಕಾದಿದೆ ಎಂದು ಕೆಲವರು ಜೆಎನ್‍ಯು ಭೇಟಿಯ ಸಮಯದಲ್ಲಿ ನಿರೀಕ್ಷಿಸಿದ್ದು ನಿಜವಾಗಿದೆ. ಕಂಗನಾ ರನೌತ ತಾನು ಮಾದಕ ವಸ್ತು ಸೇವಿಸುತ್ತಿದ್ದೆ ಎಂಬ ಹೇಳಿಕೆ ನೀಡಿದ್ದಾಳೆ. ಆಕೆ ಸರ್ಕಾರದ ಪರ ಇದ್ದುದರಿಂದ ಆಕೆಯ ವಿಚಾರಣೆ ಮಾತ್ರ ಆಗುತ್ತಿಲ್ಲ.

ಸಿನೆಮಾ ಜನ ಆಳುವವರ ವಕ್ರ ದೃಷ್ಟಿಗೆ ಬಿದ್ದರೆ ಏನೆಲ್ಲ ಅನಾಹುತ ಆಗುತ್ತದೆ ಎನ್ನುವುದಕ್ಕೆ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ದೊಡ್ಡÀ ಉದಾಹರಣೆ. ಸಿನಿಮಾದ ಕೋಟ್ಯಂತರ ರೂಪಾಯಿ ಬೆಲೆಯ ಸೆಟ್ ಹಾಳು ಮಾಡಲಾಯಿತು. ಚಿತ್ರ ಪ್ರದರ್ಶನಕ್ಕೆ ತಕರಾರು ಇಲ್ಲ ಎಂದು ಸೆನ್ಸಾರ್ ಮಂಡಳಿ ಸರ್ಟಿಫಿಕೇಟ ನೀಡಿದ್ದರೂ ಕೋರ್ಟಿಗೆ ಹೋಗಿ ತಡೆ ತರಲಾಯಿತು. ಕೊನೆಗೆ ಚಿತ್ರದ ಹೆಸರನ್ನು ಮೂಲ ಕೃತಿ ಆಧರಿಸಿದ ‘ಪದ್ಮಾವತ್’ ಹೆಸರಲ್ಲಿ ಬಿಡುಗಡೆ ಮಾಡುವಷ್ಟರಲ್ಲಿ ನಿರ್ಮಾಪಕರು ಸುಸ್ತಾಗಿ ಹೋಗಿದ್ದರು.

ಸಿನೆಮಾ ಅತ್ಯಂತ ಪ್ರಭಾವಿ ಮಾಧ್ಯಮ. ಈಗಾಗಲೇ ಬಹಳಷ್ಟು ವಾಹಿನಿಗಳು ಮತ್ತು ಪತ್ರಿಕೆಗಳನ್ನು ನಾನಾ ಉಪಾಯಗಳಿಂದ ತನ್ನ ಪರ ಮಾಡಿಕೊಂಡಿರುವ ಸರ್ಕಾರಕ್ಕೆ ಕೆಲವೇ ಕೆಲವು ವಾಹಿನಿಗಳು, ಡಿಜಿಟಲ್ ಮಾಧ್ಯಮಗಳು ಸತ್ಯ ಹೇಳುತ್ತಿರುವುದರಿಂದ ಅದಕ್ಕೆ ಸಹಿಸಲು ಸಾಧ್ಯ ಆಗುತ್ತಿಲ್ಲ. ಹಾಗಾಗಿ ಇಡೀ ಸಿನೆಮಾ ರಂಗವನ್ನೇ ಹೆದರಿಸಿ ತನ್ನ ಹಿಡಿತದಲ್ಲಿ ಇಟ್ಟುಕೊಂಡರೆ ಯಾವ ವಿರೋಧವೂ ತಲೆದೋರುವುದಿಲ್ಲ ಎನ್ನುವ ಭ್ರಮೆಯಲ್ಲಿ ಬಲಪಂಥೀಯ ಸರ್ಕಾರ ಇದ್ದಂತಿದೆ. ಅದಕ್ಕೆ ಪೂರಕವಾಗಿ ಡ್ರಗ್ ಹಗರಣ ದೊರಕಿರುವದರಿಂದ ಇದೇ ಸಂದರ್ಭ ಬಳಸಿಕೊಂಡು ಇಡೀ ಚಿತ್ರರಂಗವನ್ನು ಹೆದರಿಸಿ, ನಡುಗಿಸಿ ತನ್ನ ವಶ ಮಾಡಿಕೊಳ್ಳುವುದು ನಡೆದಿದೆ. ಮುಂಚೂಣಿಯಲ್ಲಿ ನಿಂತು ದನಿ ಎತ್ತುತ್ತಿರುವವರನ್ನು ಪಳಗಿಸುವ ಕೆಲಸವನ್ನು ಸರ್ಕಾರದ ಆಜ್ಞಾಧಾರಕ ತನಿಖಾ ಸಂಸ್ಥೆಗಳ ಕೈಗೆ ಒಪ್ಪಿಸಲಾಗಿದೆ. ಇದಕ್ಕಾಗಿ ಮಾರಾಟವಾಗಿರುವ ಮಾಧ್ಯಮಗಳನ್ನೂ ಬಳಸಿಕೊಳ್ಳಲಾಗುತ್ತಿದೆ.

ತನಗಾಗದ ರಾಜಕೀಯ ನಾಯಕರ ಮೇಲೆ ಪ್ರಕರಣ ಹೂಡಿ ಬೆದರಿಸಿ, ಬಂಧಿಸಿ, ಜೈಲಿಗೆ ಕಳುಹಿಸಿ ಮಣಿಸುವ ಕೆಲಸದಂತೆ ಈಗ ಇಡೀ ಚಿತ್ರರಂಗವನ್ನು ಮಣಿಸುವ ಕೆಲಸಕ್ಕೆ ಹೊರಟಂತೆ ಕಾಣುತ್ತಿದೆ. ನಮ್ಮಲ್ಲಿ ಸಾಹಿತ್ಯ ಎನ್ನುವುದು ಎಂದೋ ತನ್ನ ಕ್ರಿಯಾಶೀಲತೆ ಕಳೆದುಕೊಂಡು ‘ಜೀ ಹುಜೂರ್’ ತನಕ್ಕೆ ಶರಣಾಗತ ಆಗಿದೆ. ಈಗ ಸಿನಿಮಾ ರಂಗವನ್ನು ಮಣಿಸಿ ಬಳಸಿದರೆ ನೂರಾರು ವರ್ಷ ಆರಾಮಾಗಿ ಮನಬಂದಂತೆ ಆಡಳಿತ ನಡೆಸಬಹುದು ಎನ್ನುವ ಭ್ರಮೆ ಇದ್ದಂತೆ ಕಾಣುತ್ತಿದೆ.

Leave a Reply

Your email address will not be published. Required fields are marked *

Back to top button
error: Content is protected !!