Editorial

ಕೆ.ಕೆ. ಕೊಪ್ಪದಿಂದ ದೆಹಲಿಗೆ ಸುರೇಶ ಅಂಗಡಿ ಪಯಣ

ಹೊಸ ರಾಜ್ಯವಾಗಿ ಕರ್ನಾಟಕ (ಆಗ ಮೈಸೂರು) ಉದಯ ಆದಾಗಿನಿಂದ ಬೆಳಗಾವಿಯದ್ದು ಯಾವಾಗಲೂ ಭಾಷಾ ಫಜೀತಿಯೇ. ಹಾವು ಸೋಲಬಾರದು, ಕೋಲು ಮುರಿಯಬಾರದು ಎಂಬಂತೆಯೇ ಇಲ್ಲಿಯ ಸ್ಥಿತಿ. ಇದರ ನಡುವೆ ರಾಜಕೀಯ ಇಲ್ಲಿ ಅರಳಲೇ ಇಲ್ಲ. ಸ್ವಾತಂತ್ರ್ಯ ಪೂರ್ವದ ಹೋರಾಟದ ಕಾಲಕ್ಕೆ ಬೆಳಗಾವಿ ಜನ ಮುಂಚೂಣಿಯಲ್ಲಿ ಇದ್ದರು. ಆದರೆ ಸ್ವಾತಂತ್ರ್ಯಾ ನಂತರ ಅದೇಕೋ ಇಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಜನರಲ್ಲಿ ಮೂಡಲೇ ಇಲ್ಲ. ಪಕ್ಕದ ಹುಬ್ಬಳ್ಳಿ ಕ್ಷೇತ್ರದಿಂದ ಸರೋಜಿನಿ ಮಹಿಷಿ, ಮೋಹಸಿನಾ, ಜಗನ್ನಾಥ ರಾವ ಜೋಷಿ ಅವರಂಥ ದಿಗ್ಗಜರು ಮುಂಚೂಣಿಗೆ ಬಂದರೂ ಬೆಳಗಾವಿ ಇನ್ನೂ ಭಾಷೆಯ ಜಂಜಾಟದಲ್ಲಿ ತೊಳಲಾಡುತ್ತಲೇ ಇತ್ತು. ಇಲ್ಲಿನ ಜನರಿಗೆ ಕೂಡ ಈ ಹಗ್ಗ ಜಗ್ಗಾಟದಿಂದಾಗಿ ತಾವು ಎಲ್ಲಿಯೂ ಸಲ್ಲದವರಾಗುತ್ತೇವೆ ಎಂಬ ಆತಂಕ.

ಸ್ವಾತಂತ್ರ್ಯ ಪೂರ್ವದಲ್ಲಿ ಇಡೀ ಮೈಸೂರು ಪ್ರಾಂತ್ಯದಲ್ಲಿ ಒಂದೂ ಕಾನೂನು ಕಾಲೇಜು ಇರಲಿಲ್ಲ. ಜನ ಕಾನೂನು ಕಲಿಯಲು ಪುಣೆ, ಮುಂಬಯಿ ಇಲ್ಲವೇ ಮದರಾಸಿಗೆ ಹೋಗಬೇಕಿತ್ತು. ವಿದ್ಯಾ ಕೇಂದ್ರ ಕೂಡ ಎನಿಸಿದ್ದ ಬೆಳಗಾವಿಗೆ ಕಾನೂನು ಕಲಿಯಲು ಆರ್.ಎಲ್. ಕಾನೂನು ಕಾಲೇಜಿಗೆ, ವಾಣಿಜ್ಯ ಪದವಿ ಪಡೆಯಲು ಗೋಗಟೆ ಕಾಲೇಜಿಗೆ, ಬಿಎ ಮುಂತಾದ ಡಿಗ್ರಿ ಓದಿಗಾಗಿ ಲಿಂಗರಾಜ ಕಾಲೇಜಿಗೆ ಅಕ್ಕಪಕ್ಕದ ಊರುಗಳಿಂದ ಅಷ್ಟೇ ಅಲ್ಲ ದೂರದ ಊರುಗಳಿಂದ ಕೂಡ ವಿದ್ಯಾರ್ಥಿಗಳು ಬರುತ್ತಿದ್ದರು. ಆದರೆ ಸ್ವಾತಂತ್ರ್ಯಾ ನಂತರ ಅದೇಕೋ ಇದು ವಿದ್ಯಾ ಕೇಂದ್ರವಾಗಿಯೂ ಬೆಳೆಯಲಿಲ್ಲ.

ರಾಜಕೀಯವಾಗಿ ಗುರುತಿಸಿಕೊಂಡ ಜನ ಕೂಡ ಇಲ್ಲಿ ಕಾಣಿಸಲಿಲ್ಲ. ಅದರ ಪರಿಣಾಮ ಎಂದರೆ ಕೇಂದ್ರದಲ್ಲಿ ಸಚಿವರಾಗಿದ್ದ ಬೆಳಗಾವಿಯವರು ಎಂದರೆ ಬಿ.ಎನ್.ದಾತಾರ, ಬಾಬಾಗೌಡ ಪಾಟೀಲ ಮತ್ತು ಸುರೇಶ ಅಂಗಡಿ ಮಾತ್ರ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಸಂಸದರು ಬಹುಕಾಲ ಕೇಂದ್ರದಲ್ಲಿ ಸಚಿವರಾದ ದಾಖಲೆ ಇದೆಯಾದರೂ ಬೆಳಗಾವಿಗೆ ಆ ಭಾಗ್ಯ ಒದಗಿದ್ದು ಕಡಿಮೆ. ಅಂಥದರಲ್ಲಿ ಈ ಕ್ಷೇತ್ರದಿಂದ ಆಯ್ಕೆಯಾದ ಸುರೇಶ ಅಂಗಡಿ ಅವರು ಕೇಂದ್ರದಲ್ಲಿ ಸಚಿವ ಆಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಬೆಳಗಾವಿ ಸಮೀಪದ ಕೆ.ಕೆ. ಕೊಪ್ಪ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಅವರು ಉದ್ಯಮಿ ಆಗಿದ್ದು ಬಹಳ ದೊಡ್ಡ ರೂಪಾಂತರ. ಹಾಗಾಗಿಯೇ ಅವರು ಬೆಳಗಾವಿ ನಗರವನ್ನು ತಮ್ಮ ನೆಲೆಯಾಗಿ ಆರಿಸಿಕೊಳ್ಳಬೇಕಾಯಿತು.

ಸಿಮೆಂಟ್, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಸರು ಮಾಡಿದ ಅವರು ಶಿಕ್ಷಣ ಕ್ಷೇತ್ರಕ್ಕೂ ಕಾಲಿರಿಸಿದ್ದರು. ಆದರೆ ಅವರು ನಿಷ್ಠೆ ಇರಿಸಿಕೊಂಡಿದ್ದು ಆರ್.ಎಸ್.ಎಸ್. ಮತ್ತು ಬಿಜೆಪಿ ಬಗೆಗೆ. ಹಾಗೆಂದು ಇತರರನ್ನು ದ್ವೇಷಿಸುವ, ಕೀಳಾಗಿ ನೋಡುವ ಸ್ವಭಾವ ಅವರದಲ್ಲ. ಬೆಳಗಾವಿ ನಗರಪಾಲಿಕೆ ಕಟ್ಟಡದ ಮೇಲೆ ಇವರು ಭಗವಾ ಧ್ವಜ ಹಾರಿಸಿ ಜನ ಮತ್ತು ಪತ್ರಿಕೆಗಳ ಆಕ್ಷೇಪಕ್ಕೆ ಗುರಿ ಆಗುವ ಮುನ್ನ ಪತ್ರಿಕೆಗಳ ಜೊತೆ ಕೂಡ ಆತ್ಮೀಯ ಸಂಬಂಧ, ಸಂಪರ್ಕ ಇರಿಸಿಕೊಂಡಿದ್ದವರು. ಪತ್ರಿಕೆಗಳಿಂದ ಆನಂತರ ಸಾಕಷ್ಟು ಅಂತರ ಕಾಯ್ದುಕೊಂಡ ಅವರು, ಜನರ ಪ್ರೀತಿಗೆ ಮಾತ್ರ ಎರವಾಗಲಿಲ್ಲ. ಅದು ಅವರ ಗೆಲುವಿನ ಗುಟ್ಟು.

1996ರಲ್ಲಿ ಸಕ್ರಿಯ ರಾಜಕಾರಣಕ್ಕೆ ಬಂದ ಅವರದ್ದು ನಾನಾ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ ದಾಖಲೆ ಇದೆ. ಬೆಳಗಾವಿ ಗ್ರಾಮಾಂತರ, ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಪಕ್ಷದ ತಳಹದಿ ಗಟ್ಟಿ ಮಾಡುವ ಕೆಲಸ ಹೊತ್ತು ನಿರ್ವಹಿಸಿದರೆಂದೇ ಇಡೀ ಜಿಲ್ಲೆಯಲ್ಲಿ ಕೇಸರಿ ನಿಧಾನವಾಗಿ ಪ್ರಸರಿಸುತ್ತಾ ಇಡೀ ಜಿಲ್ಲೆ ಕೇಸರಿಮಯ ಆಗಿ ಹೊಮ್ಮಿತು. ಅದರ ಪರಿಣಾಮವನ್ನು ಇತ್ತೀಚಿನ ಚುನಾವಣೆಗಳಲ್ಲಿ ನಾವು ಕಂಡಿದ್ದೇವೆ. ಇದೇ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸತತ ಆಯ್ಕೆಯಾದ ಸುರೇಶ ಅಂಗಡಿ ಅವರು ಕೇಂದ್ರದಲ್ಲಿ ರೈಲ್ವೆ ಖಾತೆಯ ರಾಜ್ಯ ಸಚಿವ ಆದದ್ದು ಹಲವು ನಿರೀಕ್ಷೆ ಹುಟ್ಟು ಹಾಕಿದ್ದು ಸಹಜ. ಮುಖ್ಯವಾಗಿ ಧಾರವಾಡದಿಂದ ಲೋಂಡಾ ಸುತ್ತಿ ಬೆಳಗಾವಿಗೆ ಬರುವ ರೈಲು ಮಾರ್ಗ ತಪ್ಪಿಸಿ, ಧಾರವಾಡದಿಂದ ನೇರವಾಗಿ ಕಿತ್ತೂರು ಮತ್ತು ಮುಗುಟ ಖಾನ ಹುಬ್ಬಳ್ಳಿ ಮಾರ್ಗವಾಗಿ ರೈಲು ಮಾರ್ಗ ರೂಪಿಸುವ ದಿಶೆಯಲ್ಲಿ ಸಾಕಷ್ಟು ಯಶಸ್ಸನ್ನು ಅಂಗಡಿ ಅವರ ಸಂಕ್ಷಿಪ್ತ ಅವಧಿಯಲ್ಲಿ ಕಂಡಿದ್ದು ನಿಜ. ಬೆಳಗಾವಿ ಮತ್ತು ಹುಬ್ಬಳ್ಳಿಯಿಂದ ಹೊಸ ರೈಲುಗಳನ್ನು ಆರಂಭಿಸಿದ್ದು ಸಹ ಅವರು ಮಾಡಿದ ಪ್ರಮುಖ ಕಾರ್ಯಗಳು. ಅದು ಅವರ ಕಾರ್ಯಕ್ಷಮತೆ ಮತ್ತು ತನ್ನ ಕ್ಷೇತ್ರದ ಪ್ರಗತಿಗಾಗಿ ಇದ್ದ ಕಾಳಜಿ ಕೂಡ ಹೌದು.

ಸಂಸದರ ಕ್ಷೇತ್ರಾಭಿವೃದ್ಧಿ ಯೋಜನೆ ಅಡಿ ಹಳ್ಳಿಯೊಂದನ್ನು ಆರಿಸಿಕೊಂಡು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅದನ್ನು ಅಭಿವೃದ್ಧಿ ಮಾಡುವ ದಿಶೆಯಲ್ಲಿ ಮೊದಲು ಹೆಜ್ಜೆ ಇಟ್ಟು ಸಾಧನೆ ಮಾಡಿದವರು ಅಂಗಡಿ. ಅದಕ್ಕಾಗಿ ಪ್ರತ್ಯೇಕ ಯುವಕರ ತಂಡವೊಂದನ್ನು ಕಟ್ಟಿ ಅವರ ಮೂಲಕ ಎಲ್ಲ ಕೆಲಸಗಳೂ ಸುಸೂತ್ರ ಜರುಗುವಂತೆ ಮಾಡಿದ್ದೂ ಅಲ್ಲದೇ ಅಲ್ಲಿ ಅತ್ಯಾಧುನಿಕ ಸಂಪರ್ಕ ಸವಲತ್ತು, ಮೂಲಭೂತ ಸೌಕರ್ಯಗಳು ದೊರೆಯುವಂತೆ ಮಾಡಿದ್ದವರು ಅವರು.

ಈ ಬಾರಿ ಅವರು ರೇಲ್ವೆ ಖಾತೆ ರಾಜ್ಯ ಸಚಿವರಾದ ನಂತರ ಈ ಭಾಗದ ಜನರಿಗೆ ಬಹಳ ಕಾಲದಿಂದ ಒಳಗೇ ಇಟ್ಟುಕೊಂಡಿದ್ದ ಆಸೆಗಳೆಲ್ಲ ನೆರವೇರುವ ಸೂಚನೆ ದೊರಕಿತ್ತು. ಎಲ್ಲ ಸರಿ ಹಾದಿಯಲ್ಲಿ ನಡೆದಿದೆ ಎನ್ನುವಷ್ಟರಲ್ಲಿ ಕೊರೋನಾ ಅವರನ್ನು ಬಲಿ ಪಡೆದು ಎಲ್ಲ ಒಮ್ಮೆಲೇ ಸ್ಥಗಿತ ಆದಂತಾಗಿದೆ. ಸಂಸತ್ತಿನ ಅಧಿವೇಶನಕ್ಕೆಂದು ದೆಹಲಿಗೆ ತೆರಳಿದ್ದ ಅವರಿಗೆ ಕೊರೋನಾ ಪರೀಕ್ಷೆ ಮಾಡಿದಾಗ ಪಾಜಿಟೀವ್ ಬಂದಿದ್ದರಿಂದ ಏಮ್ಸ ಆಸ್ಪತ್ರೆಗೆ ಸೇರಿಸಲಾಗಿತ್ತು. ಚೇತರಿಸಿಕೊಂಡು ಮರಳಿ ಚೈತನ್ಯದಿಂದ ಕನಸುಗಳ ಸಾಕಾರದಲ್ಲಿ ತೊಡಗುತ್ತಾರೆ ಎಂದು ಭಾವಿಸಿದ್ದ ಬೆಳಗಾವಿ ಜನರಿಗೆ ಅವರ ಸಾವಿನ ಸುದ್ದಿಯಿಂದ ಸಿಡಿಲು ಬಡಿದಂತೆ ಆಗಿದೆ.

ಕೆ.ಕೆ. ಕೊಪ್ಪದ ರೈತ ಕುಟುಂಬದಲ್ಲಿ ಹುಟ್ಟಿ ಉದ್ಯಮಿ ಎನಿಸಿಕೊಂಡು, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ ಹೆಜ್ಜೆ ಗುರುತು ಮೂಡಿಸಿದ ಸುರೇಶ ಅಂಗಡಿ ಅವರದ್ದು ಪಕ್ಷ ಮರೆತು ಎಲ್ಲರೂ ಗೌರವಿಸುವ ವ್ಯಕ್ತಿತ್ವ. ಅದಕ್ಕೆ ಅವರ ನಡೆ, ನುಡಿ ಮತ್ತು ಜನರ ಪರ ಕಾಳಜಿ ಕಾರಣ. ರಾಜಕೀಯವಾಗಿ ಹಿಂದೆಯೇ ಉಳಿದಿದ್ದ ಬೆಳಗಾವಿಯ ಕನಸುಗಳು ಇವರಿಂದಾದರೂ ನನಸಾಗುತ್ತವೆ ಎನಿಸುವ ಹೊತ್ತಿಗೇ ಅವರು ಇಲ್ಲವಾಗಿರುವುದು ಈ ಭಾಗದ ದುರ್ದೈವ. ಇವೆಲ್ಲ ಆಗುಹೋಗುಗಳ ನಡುವೆ ಬೆಳಗಾವಿ ಮತ್ತೊಮ್ಮೆ ತನ್ನ ಪರ ದುಡಿಯುವ ಅತ್ಯುತ್ತಮ ರಾಜಕೀಯ ವ್ಯಕ್ತಿಯನ್ನು ಹುಡುಕಿಕೊಳ್ಳುವ ಕೆಲಸವನ್ನು ಈಗ ಮಾಡಬೇಕಿದೆ. ಅಂಥ ಸಮರ್ಥ ಆಯ್ಕೆಯಿಂದ ಅಂಗಡಿ ಅವರ ಕನಸುಗಳಿಗೆ ನ್ಯಾಯ ದೊರಕೀತು.

-ಎ.ಬಿ.ಧಾರವಾಡಕರ

Leave a Reply

Your email address will not be published. Required fields are marked *

Back to top button
error: Content is protected !!